ಕುಂದಾಪುರ: ಖಾಸಗಿ - ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಚಾಲಕ ಸಹಿತ ಹಲವು ಪ್ರಯಾಣಿಕರಿಗೆ ಗಾಯ

ಕುಂದಾಪುರ: ಖಾಸಗಿ ಬಸ್ಸೊಂದು ಕೆಎಸ್ಸಾರ್ಟಿಸಿ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದ್ದು ಖಾಸಗಿ ಬಸ್ಸಿನ ಚಾಲಕ ಸಹಿತ ಎಂಟು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಕುಂದಾಪುರದಿಂದ ಹೆಮ್ಮಾಡಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿದ್ದ ರಶ್ಮೀತಾ, ದಿವ್ಯಾ, ಚೈತ್ರ, ಚಂದ್ರವತಿ, ಜ್ಯೋತಿ, ರಕ್ಷೀತಾ, ರಾಧಕೃಷ್ಣ ಎಂಬವರು ಗಾಯಗೊಂಡಿದ್ದಾರೆ.
ಘಟನೆ ವಿವರ: ಖಾಸಗಿ ಬಸ್ಸಿನ ಚಾಲಕ ಮನೋಹರ್ ಎಂಬಾತ ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದು ತಲ್ಲೂರು ಬಳಿ ಇಂಡಿಕೇಟರ್ ಹಾಕಿ ತಿರುಗಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ರಶ್ಮೀತಾ, ದಿವ್ಯಾ ಹಾಗೂ ಚೈತ್ರ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಖಾಸಗಿ ಬಸ್ ಚಾಲಕ ಮನೋಹರ್ ಹಾಗೂ ಬಸ್‌ನ ಪ್ರಯಾಣಿಕರಾದ ಚಂದ್ರವತಿ, ಜ್ಯೋತಿ, ರಕ್ಷೀತಾ ಹಾಗೂ ರಾಧಕೃಷ್ಣ ಎಂಬವರು ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.