ವಿಟ್ಲ: ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ನಿಧನ

ವಿಟ್ಲ: ಹಿರಿಯ ವಿದ್ವಾಂಸ, ಕಬಕ ಸಮೀಪದ ನಿವಾಸಿ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ (61) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮುಂಜಾನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ತನ್ನ ಮನೆಯಲ್ಲಿ ನಡೆಯುವ 'ಮೌಲನಾ ಹಲ್ಕಾ ದ್ಸಿಕ್ರ್' ಆಧ್ಯಾತ್ಮಿಕ ಸಭೆಗೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸಹಿತ ದೇಶ ವಿದೇಶಗಳ ಹಲವಾರು ಗಣ್ಯರು ಆಗಮಿಸುತ್ತಿದ್ದರು. ಮಲೇಷ್ಯಾ, ಸಿಂಗಾಪುರ, ದುಬೈ ಸಹಿತ ವಿವಿಧ ರಾಷ್ಟಗಳಲ್ಲಿ ಆಧ್ಯಾತ್ಮಿಕ ಸಭೆಗಳನ್ನು ನಡೆಸಿ ಹಲವಾರು ಅಭಿಮಾನಿ ವರ್ಗವನ್ನು ಹೊಂದಿದ್ದರು. ಕೊಡುಗೈದಾನಿಯೂ ಪರೋಪಕಾರಿಯೂ ಆಗಿದ್ದ ಅವರು ಜನಾನುರಾಗಿದ್ದರು.
ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿ, 10 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಅಭಿಮಾನಿಗಳು, ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಮನೆಗೆ 'ಸಮಸ್ತ' ದ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿ ಕುಟ್ಟಿ ಉಸ್ತಾದ್, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಬಂಬ್ರಾಣ ಉಸ್ತಾದ್, ಉಸ್ಮಾನುಲ್ ಫೈಝಿ ತೋಡಾರ್, ಸಿ.ಕೆ.ಕೆ. ಮಾಣಿಯೂರ್, ಚೆಂಗಳ ಅಬ್ದುಲ್ಲಾ ಫೈಝಿ, ಮಾಣಿ ದಾರುಲ್ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ, ಖಾಝಿ ಹಾಜಿ. ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಸಹಿತ ಹಲವಾರು ನಾಯಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.







