ಔಷಧ ನಿರೀಕ್ಷಕರ ಅಂತಿಮ ಆಯ್ಕೆ ಪಟ್ಟಿ ರದ್ದು: ಹೈಕೋರ್ಟ್

ಬೆಂಗಳೂರು, ಮೇ 3: ಔಷಧ ನಿರೀಕ್ಷಕರ ಹುದ್ದೆಗಳ ನೇಮಕಕ್ಕೆ ಸಿದ್ಧಪಡಿಸಲಾಗಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿರುವ ಹೈಕೋರ್ಟ್, ಹೊಸದಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ(ಕೆಪಿಎಸ್‍ಸಿ) ನಿರ್ದೇಶಿಸಿದೆ.
ಈ ಸಂಬಂಧ ಎನ್.ಹರೀಶ್ ಸೇರಿದಂತೆ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಆಯ್ಕೆ ಪ್ರಕ್ರಿಯೆ ಆರಂಭಿಸಿದ ನಂತರ, ಅದೂ ಕೆಲವು ಅಭ್ಯರ್ಥಿಗಳ ಸಂದರ್ಶನ ಮುಗಿದ ಬಳಿಕ ರಾಜ್ಯ ಸರಕಾರವು ಔಷಧ ನಿರೀಕ್ಷಕರ ನೇಮಕಾತಿಗೆ ಹೆಚ್ಚುವರಿ ಅರ್ಹತಾ ಮಾನದಂಡ ನಿಗದಿಪಡಿಸಿದೆ. ಅಭ್ಯರ್ಥಿಗಳು ಡ್ರಗ್ಸ್ ತಯಾರಕ ಅಥವಾ ಪರೀಕ್ಷಾ ಸಂಸ್ಥೆಯಲ್ಲಿ ಕನಿಷ್ಠ 18 ತಿಂಗಳ ಅನುಭವ ಹೊಂದಿರಬೇಕು ಎಂಬುದಾಗಿ ಸರಕಾರ ಮಾನದಂಡ ನಿಗದಿಪಡಿಸಿದೆ.
ಅಲ್ಲದೆ, ನೇಮಕ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ದಾಖಲಾತಿ ಪರಿಶೀಲನೆ ನಡೆದು ಸಂದರ್ಶನಗಳು ಆರಂಭವಾದ ನಂತರ ಈ ರೀತಿ ಹೆಚ್ಚುವರಿ ಅರ್ಹತಾ ಮಾನದಂಡ ನಿಗದಿಪಡಿಸಿರುವುದು ಅಸಂವಿಧಾನಿಕ ಎಂದ ಹೈಕೋರ್ಟ್, ಸಿದ್ಧಪಡಿಸಿರುವ ಅಂತಿಮ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿದೆ.
ಹೊಸದಾಗಿ ಮೊದಲಿನ ಅರ್ಹತಾ ಮಾನದಂಡಗಳನ್ನು ಆಧರಿಸಿಯೇ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಕೆಪಿಎಸ್‍ಸಿಗೆ ನಿರ್ದೇಶಿಸಿದೆ.





