ನೇಪಾಳ: ಪರ್ವತದಲ್ಲಿ ಗಿಡಮೂಲಿಕೆ ಸಂಗ್ರಹಿಸುತ್ತಿದ್ದ 6 ಮಂದಿ ಹಿಮಪಾತಕ್ಕೆ ಬಲಿ?

ಕಠ್ಮಂಡು,ಮೇ 3:ನೇಪಾಳದ ಎರಡು ದುರ್ಗಮ ಪರ್ವತ ಪ್ರಾಂತಗಳಲ್ಲಿ ಮಂಗಳವಾರ ಭೀಕರ ಹಿಮಪಾತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಆರು ಮಂದಿ ನಾಪತ್ತೆಯಾಗಿದ್ದಾರೆಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಅತ್ಯಂತ ಅಪೂರ್ವವಾದ ಗಿಡಮೂಲಿಕೆಯನ್ನು ಸಂಗ್ರಹಿಸಲು ಅವರು ಆ ಪರ್ವತಪ್ರದೇಶದಲ್ಲಿ ಬೀಡುಬಿಟ್ಟಿದ್ದರೆಂದು ಮೂಲಗಳು ತಿಳಿಸಿವೆ.
ಹಿಮಾಲಯ ಪ್ರದೇಶಗಳಲ್ಲಿ ದೊರೆಯುವ ಅಪೂರ್ವ ಗಿಡಮೂಲಿಕೆಯನ್ನು ಹೆಕ್ಕುತ್ತಿದ್ದ ಯರ್ಶಗುಂಭ ಎಂಬ ಹೆಸರಿನ ಈ ಅಪರೂಪದ ಗಿಡಮೂಲಿಕೆಯು ಹುರುಪು ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆಯೆನ್ನಲಾಗಿದ್ದು, ಅದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ.
ಈ ಗಿಡಮೂಲಿಕೆಯನ್ನು ಸಂಗ್ರಹಿಸಲು ದಾರ್ಶೂಲ ಜಿಲ್ಲೆಯ ಪರ್ವತಪ್ರದೇಶದಲ್ಲಿ ಡೇರೆಗಳನ್ನು ಹಾಕಿ ಬೀಡುಬಿಟ್ಟಿದ್ದ 12 ಮಂದಿಯ ಮಂಗಳವಾರ ಸಂಭವಿಸಿದ ಹಿಮಪಾತದಲ್ಲಿ ಭೂಸಮಾಧಿಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅವರಲ್ಲಿ ಏಳು ಮಂದಿಯನ್ನು ರಕ್ಷಣಾ ಕಾರ್ಯಕರ್ತರು ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ಜೀವಂತವಾಗಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಹಿಮಪಾತ ಸಂಭವಿಸಿದ ಸ್ಥಳಕ್ಕೆ 25 ಮಂದಿ ಭದ್ರತಾ ಸಿಬ್ಬಂದಿಯ ತಂಡವೊಂದು ಧಾವಿಸಿದೆಯೆಂದು ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.