ಜೈಲಿನಲ್ಲಿ ನಿರಶನ ನಿರತ ಫೆಲೆಸ್ತೀನ್ ಹೋರಾಟಗಾರ ಅದ್ನಾನ್ ನಿಧನ
► ಗಾಝಾದಲ್ಲಿ ಭಾರೀ ಪ್ರತಿಭಟನೆ ► ಇಸ್ರೇಲ್ ಗಡಿಗೆ ಹಮಸ್‌ನಿದ ರಾಕೆಟ್ ದಾಳಿ

ವಾಶಿಂಗ್ಟನ್,ಮೇ 3: ಸುಮಾರು ಮೂರು ತಿಂಗಳುಗಳ ಉಪವಾಸ ಮುಷ್ಕರ ನಡೆಸುತ್ತಿದ್ದ ಫೆಲೆಸ್ತೀನ್ ಕೈದಿಯೊಬ್ಬರು ಮಂಗಳವಾರ ಇಸ್ರೇಲ್‌ನ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಇಸ್ಲಾಮಿಕ್ ಜಿಹಾದ್ ಸಂಘಟನೆಯ ಪ್ರಮುಖ ನಾಯಕನಾದ ಖಾದಿರ್ ಅದ್ನಾನ್ ಮೃತ ಪಟ್ಟ ಫೆಲೆಸ್ತೀನಿ ಹೋರಾಟಗಾರ. ಯಾವುದೇ ಆರೋಪವಿಲ್ಲದೆಯೇ ಪೆಲೆಸ್ತೀನ್ ನಾಗರಿಕರನ್ನು ಸಾಮೂಹಿಕವಾಗಿ ಬಂಧನದಲ್ಲಿರಿಸುವ ಇಸ್ರೇಲ್‌ನ ಕ್ರಮವನ್ನು ಪ್ರತಿಭಟಿಸಿ ಅವರು ಕಳೆದ ಮೂರು ತಿಂಗಳುಗಳಿಂದ ಜೈಲಿನಲ್ಲಿ ನಿರಶನ ನಡೆಸುತ್ತಿದ್ದರು. 45 ವರ್ಷದ ಖಾದಿರ್ ಅದ್ನಾನ್ ಅವರು, ಇಸ್ರೇಲ್‌ನ ಸೆರೆಮನೆಯಲ್ಲಿ ನಿರಶನ ನಡೆಸಿ ಸಾವನ್ನಪ್ಪಿದ ಪ್ರಪ್ರಥಮ ಹೋರಾಟಗಾರರಾಗಿದ್ದಾರೆ.
ಖಾದಿರ್ ಅದ್ನಾನ್ ನಿಧನದ ಬೆನ್ನಲ್ಲೇ ಗಾಝಾದ ಫೆಲೆಸ್ತೀನ್ ಹೋರಾಟಗಾರರು ದಕ್ಷಿಣ ಇಸ್ರೇಲ್‌ನ ಜನದಟ್ಟಣೆಯ ಪ್ರದೇಶಗಳ ಮೇಲೆ 26 ರಾಕೆಟ್‌ಗಳನ್ನು ಎಸೆದಿದ್ದಾರೆ. ದಾಳಿಯಲ್ಲಿ ಸ್ಡೆರೊಟ್ ನಗರದ ನಿರ್ಮಾಣ ಹಂತದ ಕಟ್ಟಡದ ಸಮೀಪ ಎರಡು ರಾಕೆಟ್‌ಗಳು ಅಪ್ಪಳಿಸಿ, 25 ವರ್ಷದ ಯುವಕನೊಬ್ಬನಿಗೆ ಗಂಭೀರ ಗಾಯವಾಗಿದ್ದು, ಇನ್ನಿಬ್ಬರಿಗೆ ಸಣ್ಣಪಟ್ಟ ಗಾಯಗಳಾಗಿವೆ.
ಖಾದಿರ್ ಅದ್ನಾನ್ ಹತ್ಯೆಯನ್ನು ಪ್ರತಿಭಟಿಸಿ ಪಶ್ಚಿಮದಂಡೆಯ ನಗರವಾದ ಹೆಬ್ರೊನ್‌ನಲ್ಲಿ ಅಂಗಡಿಮುಂಗಟ್ಟೆಗಳು ಬಂದ್ ಆಚರಿಸಿದವು. ಕೆಲವು ಪ್ರತಿಭಟನಕಾರರು ಇಸ್ರೇಲಿ ಸೈನಿಕರ ಮೇಲೆ ಉರಿಯುತ್ತಿರುವ ಟೈರ್‌ಗಳನ್ನು ಎಸೆದಿದ್ದಾರೆ ಹಾಗೂ ಕಲ್ಲುತೂರಾಟ ನಡೆಸಿದ್ದಾರೆ. ಅವರನ್ನು ಚದುರಿಸಲು ಇಸ್ರೇಲಿ ಸೈನಿಕರು ಅಶ್ರುವಾಯು ಹಾಗೂ ರಬ್ಬರ್ ಬುಲೆಟ್‌ಗಳನ್ನು ಎಸೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಾಝಾಪಟ್ಟಿ ಮೇಲೆ ಇಸ್ರೇಲ್ ವಾಯುದಾಳಿ
ನಿರಶನ ನಿರತ ಅದ್ನಾನ್ ಖಾದರ್ ಸಾವನ್ನಪ್ಪಿದ ಬಳಿಕ ಪೆಲೆಸ್ತೀನ್ ಹೋರಾಟಗಾರರು ದಕ್ಷಿಣ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದ ಬೆನ್ನಲ್ಲೇ ಇಸ್ರೇಲ್ ವಾಯುಪಡೆಯ ಜೆಟ್ ಗಾಝಾಪಟ್ಟಿಯ ಮೇಲೆ ಬಾಂಬ್ ದಾಳಿ ನಡೆಸಿವೆ.
ಇಸ್ರೇಲ್ ವಾಯುಪಡೆಯ ಜೆಟ್ ವಿಮಾನಗಳು ಹಮಸ್ ಹೋರಾಟಗಾರರ ತರಬೇತಿ ಶಿಬಿರಗಳನ್ನು ಗುರಿಯಿರಿಸಿ ಬಾಂಬ್‌ಗಳನ್ನು ಎಸೆದಿರುವುದಾಗಿ ವರದಿಗಳು ತಿಳಿಸಿವೆ. ಗಾಝಾ ಕರಾವಳಿ ಪ್ರದೇಶವು ಹಮಸ್ ನಿಯಂತ್ರಣದಲ್ಲಿದೆ.