ರೈತರ ಜಮೀನು ಇಂಡೀಕರಣ: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ಹಿಂಜರಿದ ಶಾಸಕ ಅಶೋಕ್ ನಾಯ್ಕ್

ಶಿವಮೊಗ್ಗ(ಮೇ.03): ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕಿನ ಒಡೆತನ ಹಾಗೂ ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಕೆ.ಬಿ ಅಶೋಕ್ ನಾಯ್ಕ್ ತಡಬಡಾಯಿಸಿದ ಘಟನೆ ನಡೆದಿದೆ.
ಶಿವಮೊಗ್ಗ ನಗರದಲ್ಲಿರುವ ಗ್ರಾಮಾಂತರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.ಗಿರೀಶ್ ಆಚಾರಿ ಎಂಬುವವರು ಸರ್ಕಾರದ ಡಿನೋಟಿಫಿಕೇಷನ್ ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.ಈ ಹಿನ್ನಲೆಯಲ್ಲಿ ಹಿನ್ನಡೆಯಾಗಿತ್ತು. ಈಗ ಸಂತ್ರಸ್ಥರ ಜಮೀನುಗಳನ್ನು ಸರ್ವೆ ಮಾಡಿ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕೇಂದ್ರದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಡಿನೋಟಿಫಿಕೇಷನ್ ರದ್ದತಿ ಪ್ರಶ್ನಿಸಿ ರೈತರೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು,ಶರಾವತಿ ಮುಳುಗಡೆ ಸಂತ್ರಸ್ಥರಿಗೆ ನ್ಯಾಯ ಒದಗಿಸುತ್ತೇವೆಂದು ಭರವಸೆ ನೀಡಿದರು.
1978 ಪೂರ್ವದಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಮಂಜೂರು ಮಾಡಿದ ಎಲ್ಲಾ ಭೂಮಿಗಳನ್ನು ಇಂಡೀಕರಣ ಮಾಡಿದ್ದಾರೆ.ಇದರಿಂದ ಸಾಗುವಳಿದಾರರು ಅತಂತ್ರರಾಗುತ್ತಾರೆಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದರು.
ಜಿಲ್ಲೆಯಲ್ಲಿ 12 ಸಾವಿರ ಹೆಕ್ಟೇರ್ ಭೂಮಿ ಇಂಡೀಕರಣ ಆಗಿದೆ.ಪಹಣಿಯಲ್ಲಿ ಅರಣ್ಯ ಎಂದು ಬರುತ್ತಿದೆ.ಇದು ರೈತರಿಗಾದ ಅನ್ಯಾಯ ಅಲ್ಲವಾ ಎಂದು ಪ್ರಶ್ನಿಸಿದರೆ,ನಾವು ನೀವು ವೈಯಕ್ತಿಕ ಮಾತನಾಡೋಣ ಎಂದು ಕಾರ್ಯಕ್ರಮದ ನೆಪ ಹೇಳಿ ಪತ್ರಿಕಾಗೋಷ್ಟಿ ಮುಕ್ತಾಯಗೊಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ದತ್ತಾತ್ರಿ,ಡಾ.ಧನಂಜಯ ಸರ್ಜಿ,ರತ್ನಾಕರ್ ಶೆಣೈ ಸೇರಿದಂತೆ ಹಲವರಿದ್ದರು.







