ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಪಕ್ಷಕ್ಕೆ ಮತ ನೀಡಿದರೆ ಭ್ರಷ್ಟಾಚಾರ ಬೆಂಬಲಿಸಿದಂತೆ: ಇನಾಯತ್ ಅಲಿ
ಚೊಕ್ಕಬೆಟ್ಟುವಿನಲ್ಲಿ ಚುನಾವಣಾ ಪ್ರಚಾರ ಸಭೆ

ಸುರತ್ಕಲ್ : ಮಂಗಳೂರು ಉತ್ತರದಲ್ಲಿ ಮತದಾರ ಬಾಂಧವರು ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವ ಪಕ್ಷಕ್ಕೆ ಮತ ನೀಡಿದರೂ ಬಿಜೆಪಿಗೆ ಲಾಭವಾಗಲಿದ್ದು, ನೀವೇ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯಕ್ ಅಲಿ ಹೇಳಿದ್ದಾರೆ.
ಉತ್ತರದ ಚೊಕ್ಕಬೆಟ್ಟುವಿನಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯ ವೇಳೆ ಯಡಿಯೂರಪ್ಪ ಅವರು ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು ರಾಜ್ಯದಲ್ಲೂ ಬಿಜೆಪಿಗೆ ಅಧಿಕಾರ ಕೊಟ್ಟರೆ ಡಬಲ್ ಇಂಜಿನ್ ಸರಕಾರ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲಿದೆ ಎಂದಿದ್ದರು. ಆದರೆ ಬಿಜೆಪಿ ಸರಕಾರ ಬಂದ ಬಳಿಕ ಎಲ್ಲಾ ವಿಚಾರಗಳಲ್ಲೂ ಭ್ರಷ್ಟಾಚಾರ ನಡೆಸಿದೆ. ಕನಿಷ್ಠ ಮಾನವೀಯತೆಯೂ ಇಲ್ಲದೆ, ಉದ್ಯೋಗ ನೀಡಲು ಮತ್ತು ಬಡವರ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲೂ ಭ್ರಷ್ಟಾಚಾರ ಎಸಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಜನರಲ್ಲಿ ಜಾತಿ ಧರ್ಮಗಳ ವಿಷ ಬೀಜ ಬಿತ್ತಿ ಕಚ್ಚಾಟ ಮಾಡಿಸಿ ನೆಮ್ಮದಿಯನ್ನು ಹಾಳುಗೆಡಹುತ್ತಿರುವ ಬಿಜೆಪಿ ಸರಕಾರವನ್ನು ತೊಲಗಿಸಿ, ಶ್ರೀ ಸಾಮಾನ್ಯರು ಗೌರವಯುತವಾದ ಬದುಕು ಕಟ್ಟಿಕೊಳ್ಳಬೇಕಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಬಹುಮತದಲ್ಲಿ ಜಯಗಳಿಸುವಂತೆ ಮಾಡುವ ಶಪಥವನ್ನು ಕಾರ್ಯಕರ್ತರು ಮತ್ತು ಮತದಾರ ಬಾಂಧವರು ಕೈಗೊಳ್ಳಬೇಕೆಂದು ಅಲಿ ನುಡಿದರು.
ಸಭೆಯಲ್ಲಿದ್ದ ಪ್ರತಿಭಾ ಕುಳಾಯಿ ಮಾತನಾಡಿ, ಇನಾಯತ್ ಅಲಿ ಕೇವಲ ವ್ಯಕ್ತಿಯಲ್ಲ, ಅವರು ಶಕ್ತಿಯಾಗಿ ಮುಂದಿನ ದಿನಗಳಲ್ಲಿ ಬರಲಿದ್ದಾರೆ ಎಂದರು. ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್ ಬಾವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಾ, ನಾನು ಸೇರಿದಂತೆ 10 ಮಂದಿ ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದೆವು. ಆದರೆ ಬಾವ ಅವರನ್ನು ಹೊರತುಪಡಿಸಿ ಯಾರೊಬ್ಬರೂ ಪಕ್ಷ ಬಿಟ್ಟು ಪಕ್ಷಾಂತರವಾಗಿಲ್ಲ ಎಂದು ತೀಕ್ಷ್ಣವಾಗಿ ನುಡಿದರು.
ಸಭೆಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಉಮೇಶ ದಂಡೆಕೇರಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಕೆ ಅಶ್ರಫ್ ಗುಲ್ಜಾರ್ ಬಾನು ಸದಾಶಿವ ಶೆಟ್ಟಿ ಶಶಿಧರ ಹೆಗಡೆ ಅನಿಲ್ ಕುಮಾರ್ ರಾಜೇಶ್ ಕುಳಾಯಿ, ಲಾರೆನ್ಸ್ ಸಮೀರ್ ಕಾಟಿಪಳ್ಳ, ಸ್ಟ್ಯಾನಿ, ಮೀರಜ್ ಪಾಲ್ ಬಶೀರ್ ಬೈಕಂಪಾಡಿ ನಿತ್ಯಾನಂದ ಶೆಟ್ಟಿ ಅಝಾದ್ ಕೃಷ್ಣಾಪುರ ಮೊದಲಾದವರು ಇದ್ದರು.
"ಮನೆಯಿಂದ ಹೊರ ಹೋದ ನಿಮ್ಮ ಮನೆಯ ಹೆಣ್ಣು ಮಕ್ಕಳು ಹಿಂತಿರುಗಿ ಮನೆಗೆ ಬರಬೇಕೆಂದರೆ ಬಿಜೆಪಿಗೆ ಮತ ಹಾಕಿ" ಎಂದು ಬಿಜೆಪಿಯವರು ಹೇಳುತ್ತಿದ್ದ ಕಾಲ ಒಂದಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಉದ್ಯೋಗ ಅಥವಾ ಇನ್ಯಾವುದೇ ಕೆಲಸಗಳ ನಿಮಿತ್ತ ಮನೆಯಿಂದ ಹೊರಹೋದ ಗಂಡು ಮಕ್ಕಳು ಹೆಣವಾಗದೆ ಮನೆಗೆ ಹಿಂದುರುಗಿ ಬರಬೇಕೆಂದು ಬಯಸುವುದಾದರೆ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಬೇಡಿ" ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಹೇಳಿದರು.
ಬಿಜೆಪಿಯವರಂತೆ ಭ್ರಷ್ಟಾಚಾರ ಮಾಡಿ ನಾನು ನನ್ನ ಜೀವನವನ್ನು ರೂಪಿಸಿಕೊಂಡಿಲ್ಲ. ನನ್ನ ತಾಯಿ ಹಾಕಿಕೊಟ್ಟ ಬುನಾದಿಯಂತೆ, " ನಾವು ಇತರರಿಗೆ ಏನು ಬಯಸುತ್ತೇವೆ, ಅದೇ ನಮಗೆ ಸಿಗಲಿದೆ" ಎಂಬ ಅಚಲ ವಿಶ್ವಾಸದಲ್ಲಿ ಬದುಕು ಕಟ್ಟಿ ಕೊಂಡವನು ಎಂದ ಅಲಿ, ನಾನು ಸುರತ್ಕಲ್ ನಲ್ಲೇ ಸಣ್ಣದೊಂದು ಮನೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಲ್ಲೇ ವಾಸ ಮಾಡಲಿದ್ದೇನೆ. ಮುಂದಿನ ಜೀವನವನ್ನು ಅಲ್ಲೇ ಕಲೆಯಲಿದ್ದು, ಇದ್ದರೂ ಅಲ್ಲೇ ಇರುತ್ತೇನೆ, ಸತ್ತರೂ ಅಲ್ಲೇ. ನಿಮ್ಮ ಪ್ರೀತಿ, ವಿಶ್ವಾಸ ವೊಂದಿದ್ದರೆ ಸಾಕು ಎಂದು ನುಡಿದರು.
