ತಿ.ನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪ ಅವರ ಪರ ನಟಿ ರಮ್ಯಾ ಪ್ರಚಾರ

ಮೈಸೂರು,ಮೇ.3: ರಾಜ್ಯ ವಿಧಾನಸಭಾ ಚುನಾವಣ ಕಾವು ದಿನೇ ದಿನೇ ಕಾವೇರುತ್ತಿದ್ದು, ಮೈಸೂರು ಜಿಲ್ಲೆ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಚಿತ್ರನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಕಾಂಗ್ರೆಸ್ ಅಭ್ಯರ್ಥಿ ಡಾ.ಎಚ್.ಸಿ.ಮಹದೇವಪ್ಪ ಅವರ ಪರ ಅಬ್ಬರದ ಪ್ರಚಾರ ಮಾಡಿದರು.
ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಬನ್ನೂರು ಹೋಬಳಿಯಲ್ಲಿ ಬುಧವಾರ ಕಾಂಗ್ರೆಸ್ ಪರ ಪ್ರಚಾರ ನಡೆಸಿದ ನಟಿ ರಮ್ಯಾ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಅತೀ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ತೀ.ನರಸೀಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ರಮ್ಯ ಪ್ರಚಾರದ ವೇಳೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಮ್ಯಾ , ನಿಮ್ಮ ಊರಿಗೆ ಯಾವ ಕೆಲಸ ಬೇಕು ಅದನ್ನು ಡಾ.ಎಚ್.ಸಿ.ಮಹದೇವಪ್ಪ ಅವರು ಮಾಡಿಕೊಡಲಿದ್ದಾರೆ. ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಎಂದು ಹೇಳಿದರು.
ರಮ್ಯಾ ಅವರ ಭಾಷಣ ಕೇಳಿ ನೆರೆದಿದ್ದ ಯುವಕರು ಜೋರಾಗಿ ಜೈಕಾರ ಹಾಕಿದರು. ಇದರಿಂದ ಪುಳಕಿತರಾದ ರಮ್ಯ ಇದಪ್ಪಾ ಬನ್ನೂರ್ ಜೋಷ್ ಎಂದು ಹೇಳುವ ಮೂಲಕ ಮತ್ತಷ್ಟು ಚಪ್ಪಾಳೆ ಗಿಟ್ಟಿಸಿದರು. ಎಲ್ಲರೂ ಹಸ್ತಕ್ಕೆ ಮತ ಹಾಕಿ ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಬೇಕು ಎಂದು ನೆರದಿದ್ದವರಲ್ಲಿ ವಿನಂತಿಸಿಕೊಂಡರು.
ಇದೇ ವೇಳೆ ರಮ್ಯ ಅವರ ಜೊತೆ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಜೊತೆಯಲ್ಲಿದ್ದರು.







