ಮೇ 6ಕ್ಕೆ ಬೆಂಗಳೂರಿನಲ್ಲಿ 36 ಕಿ.ಮೀ ರೋಡ್ ಶೋ ಮಾಡಲಿರುವ ಪ್ರಧಾನಿ ಮೋದಿ

ಬೆಂಗಳೂರು, ಮೇ 4: ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 6ರಂದು ಶನಿವಾರ ಬೆಂಗಳೂರಿನಲ್ಲಿ ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ಸಂಸದ ಪಿ.ಸಿ. ಮೋಹನ್ ತಿಳಿಸಿದ್ದಾರೆ.
ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 6ರಂದು ಪ್ರಧಾನಿಯು ಬೆಂಗಳೂರಿನ 17 ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ ದೂರ ರೋಡ್ ಶೋ ನಡೆಸಲಿದ್ದಾರೆ ಎಂದರು.
ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ 10.1 ಕಿ.ಮೀ, ಸಂಜೆ 4ರಿಂದ ರಾತ್ರಿ 10 ರವರೆಗೆ 26.5 ಕಿ.ಮೀ ದೂರ ರೋಡ್ ಶೋ ನಡೆಯಲಿದ್ದು, ಹತ್ತು ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ ಸುರಂಜನ್ ದಾಸ್ ರಸ್ತೆಯಿಂದ ಆರಂಭವಾಗುವ ಯಾತ್ರೆ, ಮಹದೇವಪುರ, ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ ಎಂದು ಮೋಹನ್ ತಿಳಿಸಿದರು.
ಸಂಜೆ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ವಿಜಯನಗರ, ಗೋವಿಂದರಾಜ ನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ರೋಡ್ ಶೋ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೆ ತೊಂದರೆಯಾಗದಂತೆ ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂಜಾಗ್ರತೆಗಳನ್ನು ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿ, ಬೆಂಗಳೂರು ಬಿಜೆಪಿ ಭದ್ರಕೋಟೆಯಾಗಿದ್ದು, ಸಬ್ ಅರ್ಬನ್ ರೈಲು, ಉಪ ನಗರ ಟೌನ್ ಶಿಪ್ ವರ್ತುಲ ರಸ್ತೆ, ಮೆಟ್ರೋ ರೈಲು ಮಾರ್ಗ 70 ಕಿ.ಮೀಗೆ ವಿಸ್ತರಣೆ, 1,500 ಎಲೆಕ್ಟ್ರಿಕ್ ಬಸ್‍ಗಳು, ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್ ಕೇಂದ್ರ ಸರಕಾರದ ಕೊಡುಗೆಯಾಗಿದೆ ಎಂದರು.
ನವೋದ್ಯಮ, ಯೂನಿಕಾರ್ನ್‍ಗೆ ಪ್ರೋತ್ಸಾಹ, ಪಿಎಂ ಆವಾಸ್ ಯೋಜನೆಯಡಿ 40 ಸಾವಿರ ಮನೆಗಳ ನಿರ್ಮಾಣ, ಸ್ವನಿಧಿ ಯೋಜನೆಯಡಿ ವ್ಯಾಪಾರಿಗಳಿಗೆ ಆರ್ಥಿಕ ನೆರವು, ಮೂರುವರೆ ವರ್ಷದಿಂದ ಉಚಿತ ಪಡಿತರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ನರೇಂದ್ರ ಮೋದಿ ಸರಕಾರ ನಗರಕ್ಕೆ ನೀಡಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣ ಗೌಡ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್.ರಮೇಶ್ ಉಪಸ್ಥಿತರಿದ್ದರು.







