ಭಾರತೀಯ ಮೂಲದ ಅಜಯ್ ಬಂಗಾ ವಿಶ್ವಬ್ಯಾಂಕ್ನ ನೂತನ ಅಧ್ಯಕ್ಷ
ಜಿನೀವಾ, ಮೇ 3: ವಿಶ್ವ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್ ಬಂಗಾ ಮಂಗಳವಾರ ನೇಮಕಗೊಂಡಿದ್ದಾರೆ. ವಿಶ್ವಬ್ಯಾಂಕ್ನ 25 ಸದಸ್ಯರ ಕಾರ್ಯಕಾರಿ ಮಂಡಳಿಯು ಐದು ವರ್ಷಗಳ ಅವಧಿಗೆ ವಿಶ್ವಬ್ಯಾಂಕ್ನ ವರಿಷ್ಠರಾಗಿ ನೇಮಿಸಿದೆ. ಜೂನ್ 2ರಂದು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಮಾಸ್ಟರ್ ಕಾರ್ಡ್ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.
ವಿಶ್ವಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ವರ್ಷದ ಫೆಬ್ರವರಿ ಯಲ್ಲಿ ನಾಮನಿರ್ದೇಶನಗೊಳಿಸಿದ್ದರು. 63 ವರ್ಷದ ಅವರು ವಿಶ್ವಬ್ಯಾಂಕ್ ವರಿಷ್ಠ ಹಾಲಿ ಡೇವಿಡ್ ಮಾಲ್ದಾಸ್ ಅವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿರುವ ಬಂಗಾ ಅವರು ದಿಲ್ಲಿ ವಿವಿಯ ಸೈಂಟ್ ಸ್ಟೀಫನ್ಸ್ ಕಾಲೇಜ್ನಲ್ಲಿ ಅರ್ಥಶಾಸ್ತ್ರ ಪದವೀಧರರು. ಅಹ್ಮದಾಬಾದ್ನ ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
2016ರಲ್ಲಿ ಭಾರತ ಸರಕಾರವು ಅವರಿಗೆ ಪದಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು.
ನೆಸ್ಲೆ ಕಂಪೆನಿಯಲ್ಲಿ ತನ್ನ ವೃತ್ತಿ ಜೀವನ ಆರಂಭಿಸಿದ ಬಂಗಾ ಅವರು ಆ ಸಂಸ್ಥೆಯಲ್ಲಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಪೆಪ್ಸಿಕೋ ಸಂಸ್ಥೆಯಲ್ಲಿ ಎರಡು ವರ್ಷ ಕಾರ್ಯನಿರ್ವಹಿಸಿದ ಅವರು ಭಾರತದಲ್ಲಿ ಆ ಕಂಪೆನಿಯ ಫಾಸ್ಟ್ಫುಡ್ ಮಳಿಗೆಗಳನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕದ ಹೂಡಿಕೆ ಸಂಸ್ಥೆ ಜನರಲ್ ಅಟ್ಲಾಂಟಿಕ್ನಲ್ಲಿ ಉಪಾಧ್ಯಕ್ಷರಾಗಿದ್ದರು. ಮಾಸ್ಟರ್ ಕಾರ್ಡ್ ಅಧ್ಯಕ್ಷ ಹಾಗೂ ಸಿಇಒ ಆಗಿ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿದ್ದರು. ಸಿಟಿ ಗ್ರೂಪ್ ಕಾರ್ಪೊರೇಶನ್ನ ಏಶ್ಯ ಪೆಸಿಫಿಕ್ ಪ್ರಾಂತದ ಸಿಇಒ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.