ದ.ಕ. ಜಿಲ್ಲಾದ್ಯಂತ ಕುಡಿಯುವ ನೀರಿಗೆ ತತ್ವಾರ
► ಏರುತ್ತಿರುವ ಬಿಸಿಲಿನ ತಾಪಮಾನ ► ಹೆಚ್ಚುತ್ತಿರುವ ಕೊಳವೆಬಾವಿಗಳ ಕೊರೆತ

ಮಂಗಳೂರು, ಮೇ 4: ದ.ಕ. ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಜನರು ಮಾತ್ರವಲ್ಲ ಜಾನುವಾರುಗಳು, ಪ್ರಾಣಿಪಕ್ಷಿಗಳು ಬಿಸಿಲ ಬೇಗೆಗೆ ತತ್ತರಿಸಿವೆ. ಕೃಷಿಕರು ತಾವು ಬೆಳೆದ ಬೆಳೆಗಳನ್ನು ಉಳಿಸಿ, ಬೆಳೆಸಲು ಹರಸಾಹಸ ಪಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಕುಡಿಯುವ ನೀರಿನ ಸಮಸ್ಯೆ ಜನರನ್ನು ಬಹುವಾಗಿ ಕಾಡುತ್ತಿದೆ.
ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ಮತ್ತು ದಿನ ಬಳಕೆಯ ನೀರಿಗಾಗಿ ಜನಸಾಮಾನ್ಯರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರು ಹೊರತುಪಡಿಸಿ ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ನೀರು ಪೂರೈಕೆ ಮಾಡುವ ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಳಿಸುವಂತೆ ಮೆಸ್ಕಾಂಗೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಸೂಚಿಸಿದ್ದಾರೆ.
ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನ ಹಲವೆಡೆ ಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸುತ್ತಿದೆ ಅನ್ನುವಷ್ಟರಲ್ಲಿ ಕಳೆದ ವಾರ ಸುರಿದ ಬಿರುಸಿನ ಮಳೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಬಿಸಿಲ ಬೇಗೆ ಇನ್ನೂ ಕೆಲಕಾಲ ಮುಂದುವರಿದರೆ ಈ ಭಾಗದಲ್ಲಿ ನೀರಿಗಾಗಿ ತತ್ವಾರ ಪಡುವ ಆತಂಕವಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಮೇ 4ರಿಂದಲೇ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಉಚಿತ ನೀರು ಪೂರೈಕೆ: ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಅನೇಕ ಸಾಮಾಜಿಕ, ಧಾರ್ಮಿಕ ಸಂಘಟನೆಗಳು ತಮ್ಮ ವ್ಯಾಪ್ತಿಯೊಳಗೆ ಉಚಿತ ನೀರುಗಳನ್ನು ಪೂರೈಸಿಕೊಳ್ಳುತ್ತಿವೆ. ಎಲ್ಲೆಲ್ಲಾ ನೀರಿನ ಸಮಸ್ಯೆ ಇದೆಯೋ ಅಲ್ಲಿಗೆ ಲಾರಿಗಳ ಮೂಲಕ ನೀರು ಪೂರೈಸುತ್ತಿರುವುದು ಕಂಡುಬರುತ್ತಿದೆ.
ಕೃಷಿಗೆ ಸಂಕಷ್ಟ: ಕೃಷಿ ಚಟುವಟಿಕೆಗೂ ಸಾಕಷ್ಟು ನೀರಿಲ್ಲದೆ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ತೆಂಗು, ಅಡಿಕೆ ತೋಟಗಳಿಗೆ ವಾರಕ್ಕೊಮೆ ಕೂಡಾ ನೀರು ಹಾಯಿಸಲಾಗುತ್ತಿಲ್ಲ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ. ಈ ಮಧ್ಯೆ ಸ್ಥಳೀಯಾಡಳಿತ ಸಂಸ್ಥೆಗಳು ಪೂರೈಕೆ ಮಾಡುವ ನೀರನ್ನು ಕೆಲವರು ಕೃಷಿ ಚಟುವಟಿಕೆಗಳಿಗೆ ಬಳಸುವ ಬಗ್ಗೆಯೂ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ವಿದ್ಯುತ್ ಸಂಪರ್ಕದ ಸಮಸ್ಯೆ: ಜಲಜೀವನ್ ಮಿಷನ್ ಯೋಜನೆ ಯಡಿಹಲವೆಡೆ ಕೊರೆಯಲಾದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕದ ಕೆಲಸ ಬಾಕಿಯುಳಿದಿದೆ. ಆದರೆ ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಜಿಲ್ಲಾಡಳಿತವು ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿದೆ. ಅನುಮತಿಯಿಲ್ಲದೆ ಸಂಪರ್ಕ ಪಡೆದರೆ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪ ಎದುರಿಸಬೇಕಾಗುತ್ತದೆ. ಹಾಗಾಗಿ ಕೆಲವು ಕಡೆ ಜಲಜೀವನ್ ಮಿಷನ್ನಡಿ ಕೊರೆದ ಬೋರ್ವೆಲ್ನಿಂದ ನೀರು ಲಭಿಸಿದರೂ ಬಳಕೆ ಮಾಡಲಾಗದೆ ಪರಿತಪಿಸು ವಂತಾಗಿದೆ.
ಬತ್ತಿದ ಅಣೆಕಟ್ಟು: ಬಿಸಿಲ ಧಗೆಗೆ ಜಿಲ್ಲೆಯ ಬಹುತೇಕ ಅಣೆಕಟ್ಟುಗಳ ನೀರಿನ ಪ್ರಮಾಣ ದಿನೇದಿನೇ ಇಳಿಮುಖವಾಗುತ್ತಿದೆ. ಇದರಿಂದ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ನೀರು ಪೂರೈಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಅಡ್ಯಾರ್-ಹರೇಕಳ ಅಣೆಕಟ್ಟಿನಿಂದ ಪ್ರತಿನಿತ್ಯ 70 ಎಂಎಲ್ಡಿ ನೀರು ಮೇಲೆಕ್ಕೆತ್ತಲು ನಿರ್ಧರಿಸಲಾಗಿದೆ. ತುಂಬೆ ಡ್ಯಾಮ್ನಲ್ಲೂ ನೀರಿನ ಮಟ್ಟ ಇಳಿಕೆ ಯಾಗಿದೆ. ಹಾಗಾಗಿ ಮಹಾನಗರ ಪಾಲಿಕೆಯ ಸಹಾಯಕ ಇಂಜಿನಿಯರ್ರ ನೇತೃತ್ವದ ತಂಡವು ಅಡ್ಯಾರ್-ಹರೇಕಳ ಅಣೆಕಟ್ಟಿ ನಿಂದ ನೀರೆತ್ತುವ ಸಾಹಸಕ್ಕೆ ಮುಂದಾಗಿವೆ.
ಮಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ತುಂಬೆ ಡ್ಯಾಮ್ನಿಂದ ಪ್ರತಿನಿತ್ಯ 160 ಎಂಎಲ್ಡಿ ನೀರು ಸರಬರಾಜಾಗುತ್ತಿದೆ. ಅಡ್ಯಾರ್ ಡ್ಯಾಮ್ನಿಂದ ಈಗ 9 ಪಂಪ್ ಬಳಸಿ 70 ಎಂಎಲ್ಡಿ ನೀರೆತ್ತುವುದರಿಂದ ತುಂಬೆ ಡ್ಯಾಮ್ನಲ್ಲಿ ನೀರಿನ ಇಳಿಕೆ ಪ್ರಮಾಣ ನಿಯಂತ್ರಣದಲ್ಲಿವೆ. ಪ್ರತಿನಿತ್ಯ 70 ಎಂಎಲ್ಡಿ ಪ್ರಮಾಣದಷ್ಟು ನೀರು ಮೇಲೆ ತ್ತಿದರೆ ಮೇ ಅಂತ್ಯದವರೆಗೆ ನೀರು ಸರಬರಾಜು ವ್ಯವಸ್ಥೆಯನ್ನು ಸರಿದೂಗಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಅಡ್ಯಾರು ಡ್ಯಾಮ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅದರ ಷಟರ್ಗೇಟ್ಗಳನ್ನು ತೆರೆಯಲಾಗಿದೆ. ಹಾಗಾಗಿ ಸಮುದ್ರದ ಉಪ್ಪು ನೀರು ಡ್ಯಾಮ್ನೊಳಗೆ ಸೇರಿವೆ ಎನ್ನಲಾಗಿವೆ. ಡ್ಯಾಮ್ನಲ್ಲಿರುವ ನೀರಿಗೆ ಉಪ್ಪು ನೀರು ಮಿಶ್ರಗೊಂಡಿರುವುದರಿಂದ ಅದನ್ನು ಬಳಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಉಪ್ಪು ನೀರು ಮೇಲ್ಬಾಗದ ನೀರಿನ ಜತೆ ಮಿಶ್ರಣವಾಗದಿದ್ದರೆ ಬಳಕೆಗೆ ಯಾವುದೇ ಆತಂಕವಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಗುಣಮಟ್ಟ ಪರೀಕ್ಷೆ: ತುಂಬೆ ಮತ್ತು ಹರೇಕಳ-ಅಡ್ಯಾರ್ ಡ್ಯಾಮ್ನಿಂದ ಪಂಪಿಂಗ್ ಮಾಡುವ ನೀರಿನ ಗುಣಮಟ್ಟವನ್ನು ತುಂಬೆಯಲ್ಲಿರುವ ಮಹಾನಗರಪಾಲಿಕೆಯ ರೇಚಕ ಸ್ಥಾವರ-2ರಲ್ಲಿರುವ ಲ್ಯಾಬ್ನಲ್ಲಿ ಪ್ರತಿನಿತ್ಯ ಪರಿಶೀಲನೆ ನಡೆಸಲಾಗುತ್ತಿವೆ ಎಂದು ತಿಳಿದುಬಂದಿವೆ.
ಸಾಮಾನ್ಯವಾಗಿ ಬಾವಿಯ ಕುಡಿಯುವ ನೀರಿನಲ್ಲಿ 30 ಮಿಲಿ ಗ್ರಾಂ ಉಪ್ಪಿನಾಂಶವಿದ್ದರೆ, ತುಂಬೆ ಡ್ಯಾಮ್ನಲ್ಲಿ 20 ಮಿಲಿ ಗ್ರಾಂ ಉಪ್ಪಿನಾಂಶ ಇದೆ. ಹರೇಕಳ-ಅಡ್ಯಾರ್ ಡ್ಯಾಮ್ನ ನೀರನ್ನು ಕೂಡಾ ಪ್ರತಿನಿತ್ಯ ಪರಿಶೀಲನೆ ಮಾಡಲಾಗಿದ್ದು, 3 ಮಿಲಿ ಗ್ರಾಂ ಉಪ್ಪಿನಾಂಶ ಕಂಡುಬಂದಿದೆ. ಸಾಮಾನ್ಯವಾಗಿ 250 ಮಿಲಿ ಗ್ರಾಂವರೆಗೆ ಉಪ್ಪುನೀರು ಮಿಶ್ರಿತವಾಗಿದ್ದರೆ ಕುಡಿಯಲು ಸಮಸ್ಯೆಯಿಲ್ಲ ಎಂದು ಲ್ಯಾಬ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನದಿ ತಟದ ಜನರ ಬವಣೆ: ಜಿಲ್ಲೆಯ ನದಿ ತಟಗಳ ಮತ್ತು ದ್ವೀಪದ ಜನರ ಬವಣೆಯಂತೂ ಶೋಚನೀಯವಾಗಿದೆ. ಸುತ್ತಮುತ್ತ ಯಥೇಚ್ಛ ನೀರಿದ್ದರೂ ಕೂಡ ಬಾವಿಗಳ ನೀರು ಬಹುತೇಕ ಬತ್ತಿವೆ. ಸಿಗುವ ಅಲ್ಪಸ್ವಲ್ಪ ಕೊಡ ನೀರು ಉಪ್ಪಾಗಿರುವುದರಿಂದ ಬಳಸಲಾಗದೆ ಹತಾಶರಾಗಿದ್ದಾರೆ. ನದಿ ತಟಗಳ ಮತ್ತು ದ್ವೀಪ ಪ್ರದೇಶಕ್ಕೆ ಟ್ಯಾಂಕರ್ಗಳ ಮೂಲಕ ನೀರು ಸಾಗಾಟವೂ ಸಾಧ್ಯವಾಗದ ಕಾರಣ ಈ ಭಾಗದ ಜನರ ಸಂಕಷ್ಟಕ್ಕೆ ಪರಿಹಾರ ಇಲ್ಲ ಎಂಬಂತಾಗಿದೆ.
ಅಂತರ್ಜಲ ಕುಸಿತ: ನದಿ ಮೂಲಗಳಲ್ಲೇ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಜೀವನಾಡಿ ಯಂತಿರುವ ನೇತ್ರಾವತಿ, ಪಯಸ್ವಿನಿ, ಫಲ್ಗುಣಿ, ನಂದಿನಿ, ಕುಮಾರ ಧಾರ, ಶಾಂಭವಿ ಮತ್ತಿತರ ಜೀವನದಿಗಳ ಜತೆಗೆ ಅಣಿಯೂರು ಹೊಳೆ, ಗುಂಡ್ಯ ಹೊಳೆ, ಕೆಂಪು ಹೊಳೆ, ಅಡ್ಡಹೊಳೆ ಮೊದಲಾದ ಹಲವು ನದಿ ಕವಲುಗಳಲ್ಲಿ ಎಪ್ರಿಲ್ನಲ್ಲೇ ನೀರು ಬರಿದಾಗಿದೆ.
ನದಿಗಳಲ್ಲದೆ ಪಶ್ಚಿಮ ಘಟ್ಟದ ತಪ್ಪಲ ಭೂಮಿಯಲ್ಲೇ ನೀರಿನ ಮಟ್ಟ ಸಾವಿರಾರು ಅಡಿ ಆಳಕ್ಕೆ ಕುಸಿಯುತ್ತಿದೆ. ನೀರಿಗಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆಡಳಿತ ವ್ಯವಸ್ಥೆಯು ಕೊಳವೆಬಾವಿಗಳನ್ನು ಆಶ್ರಯಿ ಸುತ್ತಿದೆ. ಕೆಲವೆಡೆ 1,000 ಅಡಿ ಕೊಳವೆ ಕೊರೆದರೂ ನೀರು ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ಮದುವೆ ಕಾರ್ಯಗಳಿಗೂ ತೊಡಕು: ಈ ಮಧ್ಯೆ ಮದುವೆ ಕಾರ್ಯ ಕ್ರಮಗಳಿಗೂ ನೀರಿನ ಸಮಸ್ಯೆ ಕಾಡತೊಡಗಿದೆ. ಕೆಲವು ಮದುವೆ ಹಾಲ್ಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಮಧ್ಯಾಹ್ನ 1:30ರ ವೇಳೆಗೆ ಮದುವೆಯೂಟ ನಿಲ್ಲಿಸುತ್ತಿರುವುದಾಗಿ ವರದಿಯಾಗಿದೆ. ಕುಡಿಯಲು, ಕೈತೊಳೆಯಲು, ಪಾತ್ರೆ ಪಗಡೆ ತೊಳೆಯಲು ನೀರಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಲಾಗುತ್ತಿವೆ.
ಮದ್ರಸಗಳ ಶೈಕ್ಷಣಿಕ ವರ್ಷ ವಿಳಂಬ: ಸಾಮಾನ್ಯವಾಗಿ ಶವ್ವಾಲ್ನ ಎರಡನೇ ವಾರದಲ್ಲಿ ಮದ್ರಸಗಳ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಈ ಬಾರಿ ಮೇ 1ರಂದು ಜಿಲ್ಲೆಯ ಬಹುತೇಕ ಮದ್ರಸಗಳಲ್ಲಿ ತರಗತಿ ಆರಂಭಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ವಿಪರೀತ ಸೆಕೆ ಮತ್ತು ಕುಡಿಯುವ ನೀರು ಹಾಗೂ ದಿನಬಳಕೆಯ ನೀರಿನ ಸಮಸ್ಯೆ ತಲೆದೋರಿ ರುವುದರಿಂದ ಮದ್ರಸಗಳ ತರಗತಿ ಪುನರಾರಂಭವನ್ನು ವಾರದ ಮಟ್ಟಿಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿವೆ.
ವಾಡಿಕೆ ಮಳೆಯೂ ಕಡಿಮೆ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಪ್ರಮಾಣವೂ ಕಡಿಮೆಯಾಗಿದೆ. ವಾಡಿಕೆಯಂತೆ ಸರಾಸರಿ 38
ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ ಈವರೆಗೆ ಸುರಿದ ಮಳೆಯಪ್ರಮಾನ ಕೇವಲ 10 ಮಿ.ಮೀ. ಮಾತ್ರ. ಸಕಾಲಕ್ಕೆ ಮಳೆ ಸುರಿಯ ದಿದ್ದರೆ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು ಎಂಬ ಮಾತು ಅಧಿಕಾರಿಗಳಿಂದಲೇ ಕೇಳಿಬರುತ್ತಿದೆ.
ನೀರು ಸೋರಿಕೆ: ವಿವಿಧ ಡ್ಯಾಮ್ನಿಂದ ನಗರಗಳಿಗೆ ದಿನನಿತ್ಯ ಕೊಳವೆಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿವೆ. ಈ ಸಂದರ್ಭ ಕೊಳವೆಗಳಲ್ಲೇ ನೀರು ಸೋರಿಕೆಯಾಗುತ್ತಿವೆ ಎಂಬ ಆರೋಪವಿದೆ. ಮೂಲವೊಂದರ ಪ್ರಕಾರ ತುಂಬೆಯಿಂದ ಪ್ರತೀ
ದಿನ ಮಂಗಳೂರಿಗೆ 160 ಎಂಎಲ್ಡಿ ನೀರು ಪಂಪಿಂಗ್ ಮಾಡಲಾಗುತ್ತಿದೆ. ಈ ಪೈಕಿ 20 ಎಂಎಲ್ಡಿ ನೀರು ಸೋರಿಕೆಯಾಗುತ್ತಿವೆ. ಇದನ್ನು ತಡೆಗಟ್ಟಿದರೆ ಸಾವಿರಾರು ಮಂದಿಗೆ ಪ್ರಯೋಜನವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
► ಕೊಣಾಜೆ ಗ್ರಾಮದ ತಾರಿಪ್ಪಾಡಿ, ಅಸೈಗೋಳಿ, ಪಟ್ಟೋರಿ ಪರಿಸರದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೊರೆಯಲಾದ ಕೊಳವೆಬಾವಿಗಳ ಮೂಲಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ ನೀರಿನ ಬವಣೆ ಸಂಪೂರ್ಣವಾಗಿ ನೀಗಿಲ್ಲ.
ಮಂಜನಾಡಿ ಗ್ರಾಮದ ಮಂಜನಾಡಿ, ಉರುಮಣೆ, ಕಲ್ಕಟ್ಟ ಮೊಂಟೆಪದವು, ಬಟ್ಯಡ್ಕ ಪ್ರದೇಶದಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದಾರೆ. ಇಲ್ಲಿ ಹಲವಡೆಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರಿನ ಸರಬರಾಜು ಮಾಡಲಾಗುತ್ತಿದೆ. ಈ ನಡುವೆ ನಳ್ಳಿ ನೀರಿನ ಸಂಪರ್ಕ ಇದ್ದವರಿಗೆ ಮಾತ್ರ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ ಎಂಬ ಆರೋಪವೂ ಕೆಲವೆಡೆ ಕೇಳಿ ಬರುತ್ತಿದೆ.
ಬಾಳೆಪುಣಿ ಗ್ರಾಮದ ಗರಡಿಪಳ್ಳ, ನವಗ್ರಾಮ ಸೈಟ್, ಕುಕ್ಕದಕಟ್ಟೆ, ಮುದುಂಗಾರು ಕಟ್ಟೆ, ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕೆಲವಡೆ ಟ್ಯಾಂಕರ್ ಮೂಲಕ ಇನ್ನು ಕೆಲವೆಡೆ ಜಲಜೀವನ್ ಮಿಷನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿನ ಸರಕಾರಿ ಬೋರ್ವೆಲ್ಗಳಲ್ಲಿ ನೀರು ಕಡಿಮೆಯಾಗಿ ಜನರು ತೊಂದರೆ ಎದುರಿಸುತ್ತಿದ್ದಾರೆ.
ಕೈರಂಗಳ ಗ್ರಾಮದ ಮೋಂಟುಗೋಳಿ, ನಡುಪದವು, ನವಗ್ರಾಮ ಸೈಟ್ನಲ್ಲೂ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಮೋಂಟುಗೋಳಿಯಲ್ಲಿ ಜಲಜೀವನ್ ಮಿಷನ್ನಡಿ ಮೂರು ಬೋರ್ವೆಲ್ ತೋಡಲಾಗಿದೆ. ಮೂರರಲ್ಲೂ ನೀರು ಸಿಗದ ಕಾರಣ ಜನರು ಕಂಗಾಲಾಗಿದ್ದಾರೆ. ಪಜೀರು, ನರಿಂಗಾನ, ಹರೇಕಳ, ಪಾವೂರು, ಬೋಳಿಯಾರು ಗ್ರಾಮದ ಹಲವೆಡೆ ನೀರಿನ ಸಮಸ್ಯೆ ಎದುರಾಗಿದೆ.
► ವಿಟ್ಲ ಹೋಬಳಿಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ತೀವ್ರ ವಾಗಿದೆ. ಹಲವು ಗ್ರಾಮಗಳಲ್ಲಿ ಬಾವಿ ಮತ್ತು ಕೊಳವೆಬಾವಿಗಳು ಬತ್ತಿ ಹೋಗಿವೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 18 ವಾರ್ಡ್ ಗಳಲ್ಲೂ ನೀರಿನ ಅಭಾವ ಉಂಟಾಗಿದೆ. ಬಹುತೇಕ ವಾರ್ಡ್ಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುತ್ತಿದ್ದವರು ಇದೀಗ ಕರೆ ಮಾಡಿದರೆ ಮಾತ್ರ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ರೋಸಿ ಹೋಗಿರುವ ನಾಗರಿಕರು ಜಿಲ್ಲಾಧಿಕಾರಿಗೆ ದೂರು ನೀಡಿರುವುದಾಗಿ ತಿಳಿದು ಬಂದಿವೆ. ವಿಟ್ಲ ಹೋಬಳಿ ವ್ಯಾಪ್ತಿಯ ಮಾಣಿ, ಕೊಳ್ನಾಡು, ವಿಟ್ಲ ಪಡ್ನೂರು, ವಿಟ್ಲ ಮುಡ್ನೂರು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಭಾಗದಲ್ಲೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಮನೆಬಾಗಿಲಿಗೆ ನೀರು ಬರುತ್ತಿದ್ದರೂ ಎತ್ತರದ ಪ್ರದೇಶಗಳಿಗೆ ಸರಬರಾಜು ಆಗುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ.
ವಿಟ್ಲ ನಗರ, ವಿಟ್ಲ ಮುಡ್ನೂರು, ಕೇಪು, ಪೆರುವಾಯಿ, ಮಾಣಿಲ, ವೀರಕಂಬ ಮತ್ತಿತರ ಗ್ರಾಮದ ಜನರು ಬಾವಿ ಮತ್ತು ಕೊಳವೆ ಬಾವಿ ಗಳನ್ನು ಆಶ್ರಯಿಸುತ್ತಿದ್ದು, ಇದೀಗ ಅದು ಕೂಡಾ ಬತ್ತಿ ಹೋಗಿವೆ. ಈ ಭಾಗಕ್ಕೆ ಶಾಶ್ವತ ನೀರಿನ ಯೋಜನೆ ಮಾಡಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ಇನ್ನೂ ಸ್ಪಂದನ ಸಿಕ್ಕಿಲ್ಲ.
► ಸುಮಾರು 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಅಧಿಕ ಮನೆಗಳಿವೆ. ಈ ಎಲ್ಲಾ ಮನೆಗಳಿಗೂ ನಗರಸಭೆಯ ವತಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ಒಂದೆರೆಡು ವಾರದೊಳಗೆ ಮಳೆ ಬಾರದೆ ಇದ್ದಲ್ಲಿ ಜನರು ನೀರಿಗಾಗಿ ಪರದಾಡಬೇಕಾದೀತು ಎಂಬ ಮಾತು ಕೇಳಿ ಬರುತ್ತಿವೆ.
► ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಯಾರಿಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ. ಕಾವೇರಿಕಟ್ಟೆ, ಬನ್ನೂರು ಮತ್ತು ಗೋಳಿಕಟ್ಟೆ ವ್ಯಾಪ್ತಿಯಲ್ಲಿ 3 ಹೊಸ ಬೋರ್ವೆಲ್ಗಳನ್ನು ಕೊರೆಸಲಾಗಿದೆ. ತುರ್ತು ವ್ಯವಸ್ಥೆಗಾಗಿ ಹೆಚ್ಚುವರಿ ಬೋರ್ವೆಲ್ ಪಂಪ್ಸೆಟ್ಗಳನ್ನು ಇರಿಸಿಕೊಳ್ಳಲಾಗಿದೆ. ಅನಿಯಮಿತ ವಿದ್ಯುತ್ ನಿಲುಗಡೆ ಮಾಡದಂತೆ ಮೆಸ್ಕಾಂ ಇಲಾಖೆಗೂ ತಿಳಿಸಲಾಗಿದೆ ಎಂದು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್ ತಿಳಿಸಿದ್ದಾರೆ.
------------------------------
ನೀರಿಗಾಗಿ ಪರದಾಟ
ಕರಾವಳಿಯಲ್ಲಿ ತಿಂಗಳ ಹಿಂದೆಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇತ್ತೀಚಿನ ದಿನಗಳಲ್ಲಂತೂ ಈ ಸಮಸ್ಯೆ ಜನ ಸಾಮಾನ್ಯರ ನೆಮ್ಮದಿ ಕೆಡಿಸಿದೆ. ಕುಡಿಯುವ ಮತ್ತು ದಿನಬಳಕೆಯ ನೀರಿಗಾಗಿ ಪರದಾಡತೊಡಗಿದ್ದಾರೆ. ಗ್ರಾಪಂ, ಪಟ್ಟಣ ಪಂಚಾ ಯತ್, ಪುರಸಭೆ, ನಗರಸಭೆ, ನಗರ ಪಾಲಿಕೆ ಹೀಗೆ ಸ್ಥಳೀಯ ಸಂಸ್ಥೆ ಗಳಿಗೆ ಕುಡಿಯುವ ನೀರಿನ ಪೂರೈಕೆಯು ಸವಾಲಾಗಿ ಪರಿಣಮಿಸಿವೆ. ಗ್ರಾಮಾಂತರ ಪ್ರದೇಶದಲ್ಲಿ ಎರಡು ದಿನಗಳಗೊಮ್ಮೆ ಕೇವಲ ಅರ್ಧ ಗಂಟೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು, ಇದು ಸಾಕಾಗದೆ ಗುಳೇ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಲಗಾಮಿಲ್ಲದ ಕೊಳವೆಬಾವಿ ಕೊರೆತ
ಕೊಳವೆಬಾವಿಗಳ ಕೊರತೆಕ್ಕೆ ಆಡಳಿತ ವ್ಯವಸ್ಥೆಯಿಂದ ಅನುಮತಿ ಪಡೆಯಬೇಕೆಂಬ ಆದೇಶವಿದ್ದರೂ ಅದನ್ನು ಲೆಕ್ಕಿಸದೆ ಎಲ್ಲೆಡೆ ತಮ್ಮಿಷ್ಟದಂತೆ ರಾತ್ರಿ ಹಗಲೆನ್ನದೆ ಕೊಳವೆಬಾವಿಗಳನ್ನು ಕೊರೆಸುವ ಪರಿಪಾಠ ಹೆಚ್ಚುತ್ತಿವೆ. ಇದರಿಂದ ಅಂತರ್ಜಲ ಕುಸಿತವೂ ಹೆಚ್ಚುತ್ತಿವೆ ಎಂಬ ಆರೋಪವೂ ಇದೆ.
ಅಂಕಿಅಂಶಗಳ ಪ್ರಕಾರ 2022ರ ಎಪ್ರಿಲ್ನಿಂದ 2023ರ ಮಾರ್ಚ್ ವರೆಗೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ 848 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಈ ಪೈಕಿ 634 ಕೊಳವೆಬಾವಿಗಳಲ್ಲಿ ಮಾತ್ರ ನೀರು ದೊರಕಿದೆ. ಹತ್ತಾರು ವರ್ಷಗಳ ಹಿಂದೆ ಕೊಳವೆಬಾವಿಯ 350 ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಈಗ 1,200 ಅಡಿಯಷ್ಟು ಕೊರೆದರೂ ನೀರು ಸಿಗುತ್ತಿಲ್ಲ ಎಂದು ಬೋರ್ವೆಲ್ ಏಜೆನ್ಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯಲು ಮಾತ್ರವಲ್ಲ ಕೃಷಿ ಚಟುವಟಿಕೆಗೆ ಅಂತರ್ಜಲವನ್ನೇ ಆಶ್ರಯಿಸಲಾಗುತ್ತದೆ. ಬಾವಿ, ಕೆರೆಯನ್ನು ಹೊರತುಪಡಿಸಿ ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಸುವುದು ಅನಿವಾರ್ಯವಾಗಿದೆ. ಆದರೆ ನಾನಾ ಕಾರಣದಿಂದ ಭೂಮಿಯಲ್ಲಿ ನೀರು ಇಂಗದ ಕಾರಣ ಈಗ ನೀರಿನ ಸಮಸ್ಯೆ ಬಿಗಡಾಯಿಸಿದೆ ಎಂದು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ.
ಮಳೆಯಾಗದಿರುವುದೇ ಸಮಸ್ಯೆ
2017 ಮತ್ತು 2019ರಲ್ಲಿ ಮಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರಗೊಂಡದ್ದರಿಂದ ನೀರಿನ ರೇಷನಿಂಗ್ ಮಾಡುವುದು ಅನಿವಾರ್ಯವಾಗಿತ್ತು. ಬಳಿಕ ನಿರಂತರವಾಗಿ ಮಾರ್ಚ್, ಎಪ್ರಿಲ್ನಲ್ಲಿ ಮಳೆಯಾದ ಕಾರಣ ನೀರಿನ ಸಮಸ್ಯೆ ಅಷ್ಟೇನೂ ಇರಲಿಲ್ಲ. ಈ ಬಾರಿ ಮೇ ಆರಂಭವಾದರೂ ಮಳೆ ನಿರೀಕ್ಷಿತ ಪ್ರಮಾಣ ದಲ್ಲಿ ಬಾರದ ಕಾರಣ ನೀರಿನ ಸಮಸ್ಯೆ ತೀವ್ರಗೊಂಡಿದೆ ಮತ್ತು ರೇಷನಿಂಗ್ ಮಾಡುವುದು ಅನಿವಾರ್ಯವಾಗಿದೆ.
ಜಿಲ್ಲೆಯ ಗ್ರಾಮಾಂತರ ಪ್ರದೇಶವಾದ ಸುಳ್ಯ, ಸುಬ್ರಹ್ಮಣ್ಯ, ಕಡಬ, ಬೆಳ್ತಂಗಡಿ ಪರಿಸರದಲ್ಲಿ ಕಳೆದ ವಾರ ಒಂದಷ್ಟು ಮಳೆ ಸುರಿದಿದೆ. ಇದರಿಂದ ಭೂಮಿ ಸ್ವಲ್ಪ ತಂಪಾಗಿವೆ. ಆದರೆ ಇನ್ನೂ ಒಂದು ವಾರ ಬಿಸಿಲಿನ ತಾಪಮಾನ ಮುಂದುವರಿದರೆ ಈ ಪ್ರದೇಶದ ಜನರೂ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾದೀತು ಎಂಬ ಆತಂಕದ ಮಾತು ಕೇಳಿ ಬರುತ್ತಿದೆ.
------------------------------
ಉಳ್ಳಾಲ ನಗರಸಭಾ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ. ನಗರಸಭಾ ವ್ಯಾಪ್ತಿಯ ನಿತ್ಯಾಧರ್ ನಗರ, ಕಾಪಿಕಾಡ್, ಗಂಡಿ, ಅಂಬಟಡಿ, ಯು.ಟಿ.ಕಾಂಪೌಂಡ್, ಚೆನ್ನರಾಯಗುಡ್ಡೆ, ಚೆಂಬುಗುಡ್ಡೆ, ಸುಂದರಿಬಾಗ್, ಅನಿಲ ಕಾಂಪೌಂಡ್, ಸುಲ್ತಾನ್ ಭಾಗ್, ಅಕ್ಕರೆಕೆರೆ, ಟಿ.ಸಿ.ರೋಡ್ ಮತ್ತಿತರ ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.
ನಗರಸಭೆಯ ವತಿಯಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಎಸ್ಎಫ್ಸಿ ಯೋಜನೆಯಡಿ ಕೊಳವೆಬಾವಿ ಮಂಜೂರಾದರೂ ಚುನಾವಣಾ ನೀತಿ ಸಂಹಿತೆಯ ಕಾರಣವನ್ನು ಮುಂದಿಟ್ಟು ಕೆಲಸ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂಬ ಆರೋಪವಿದೆ.
ಉಳ್ಳಾಲ ದರ್ಗಾ ಅಧೀನದ ಬಾವಿಯಿಂದ ನಗರಸಭಾಡಳಿತವು ಲಾರಿ/ಟ್ಯಾಂಕರ್ಗಳಲ್ಲಿ ನೀರು ಸಂಗ್ರಹಿಸಿ ಬೇರೆ ಬೇರೆ ಕಡೆ ಸರಬರಾಜು ಮಾಡುತ್ತಿದೆ. ಆದರೆ ಹೆಚ್ಚಿನ ಕಡೆ ನೀರು ತಲುಪುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಮೂಲವೊಂದರ ಪ್ರಕಾರ ದಿನನಿತ್ಯ ಸುಮಾರು 127 ಲಾರಿ/ಟ್ಯಾಂಕರ್ಗಳಲ್ಲಿ ಅಂದಾಜು 3 ಲಕ್ಷ ಲೀ.ನಷ್ಟು ನೀರನ್ನು ಉಳ್ಳಾಲ ದರ್ಗಾ ಅಧೀನದ ಬಾವಿಯಿಂದ ಸಂಗ್ರಹಿಸಿ ಉಳ್ಳಾಲದ ಸುತ್ತಮುತ್ತಲಿನ ಪ್ರದೇಶಗಳಿಗೆ ಪೂರೈಕೆ ಮಾಡಲಾಗುತ್ತಿದೆ.
ತಲಪಾಡಿ ಗ್ರಾಪಂ, ಸೋಮೇಶ್ವರ ಪುರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ಉಲ್ಬಣಿಸಿದೆ. ಚುನಾವಣೆಯ ನಿಮಿತ್ತ ನಗರಸಭೆಯ ಬಹುತೇಕ ಕೌನ್ಸಿಲರ್ಗಳು ಆಯಾ ಪಕ್ಷಗಳ ಅಭ್ಯರ್ಥಿಗಳ ಪರ ಕಾರ್ಯನಿರತರಾಗಿದ್ದರೆ, ನಗರಸಭೆಯ ಅಧಿಕಾರಿಗಳು ಚುನಾವಣಾ ಕಾರ್ಯಚಟು ವಟಿಕೆಯಲ್ಲಿ ಮಗ್ನರಾಗಿರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೇಳುವವರು ಇಲ್ಲದಂತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
---------------------------
ದ.ಕ. ಜಿಲ್ಲೆಯ ನಾನಾ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ಉಳ್ಳಾಲ ತಾಲೂಕಿನ ಅನೇಕ ಗ್ರಾಮಗಳಲ್ಲಿ ಈ ಸಮಸ್ಯೆ ಉಲ್ಬಣಿಸಿವೆ. ಅದರ ಪರಿಹಾರಕ್ಕಾಗಿ ಜಿಪಂ ಸಿಇಒ ಡಾ.ಕುಮಾರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಿಸಲಾಗುತ್ತಿದೆೆ. 15ನೇ ಹಣಕಾಸು ನಿಧಿಯಿಂದ ಜಿಲ್ಲೆಯ ಸುಮಾರು 50ಕ್ಕೂ ಅಧಿಕ ಹಳೆಯ ಬೋರ್ವೆಲ್ಗಳ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಕು