ಅನುಸೂಚಿಯಲ್ಲಿ ಲಡಾಖ್ ಸೇರ್ಪಡೆಗಾಗಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿರುವ ಸೋನಮ್ ವಾಂಗ್ಚುಕ್

ಹೊಸದಿಲ್ಲಿ: ಹೊಸತನದ ಹರಿಕಾರ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಮ್ ವಾಂಗ್ಚುಕ್ ಅವರು ಲಡಾಖ್ಗೆ ವಿವಿಧ ಸುರಕ್ಷತೆಗಳಿಗಾಗಿ ಆಗ್ರಹಿಸಿ 10 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ನಿರ್ಧರಿಸಿದ್ದಾರೆ. ಈ ಹಿಂದೆ ಜನವರಿಯಲ್ಲಿ ಅವರು ಐದು ದಿನಗಳ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು.
‘ಸಂವಿಧಾನದ ಆರನೇ ಅನುಸೂಚಿಯನ್ನು ಲಡಾಖ್ಗೆ ವಿಸ್ತರಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಸರಕಾರವು ನಿರ್ಲಕ್ಷಿಸಿರುವುದು ತಾನು ಮತ್ತೆ ಉಪವಾಸ ಸತ್ಯಾಗ್ರಹ ನಡೆಸಲು ಕಾರಣವಾಗಿದೆ. ಅದು ಲಡಾಖ್ಗಾಗಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ಮೊದಲ ಭರವಸೆಯಾಗಿತ್ತು ಮತ್ತು ಅದನ್ನು ನಂಬಿ ಲಡಾಖ್ ನ ಜನರು ಬಿಜೆಪಿಗೆ ಮತ ನೀಡಿದ್ದರು. ಪ್ರಣಾಳಿಕೆಯನ್ನು ನೀವು ಏನನ್ನಾದರೂ ನಂ.1 ಅಜೆಂಡಾ ಆಗಿಟ್ಟುಕೊಂಡರೆ ಮತ್ತು ಚುನಾವಣೆಯಲ್ಲಿ ಗೆದ್ದ ನಂತರ ಅದನ್ನು ಸಂಪೂರ್ಣವಾಗಿ ಕಡೆಗಣಿಸಿದರೆ ಜನರು ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಾಂಗ್ಚುಕ್ ಹೇಳಿದರು.
ಆರನೇ ಅನುಸೂಚಿಯು ಬುಡಕಟ್ಟು ಪ್ರದೇಶಗಳಲ್ಲಿ ಸ್ವಾಯತ್ತ ಆಡಳಿತಾತ್ಮಕ ಜಿಲ್ಲಾ ಮಂಡಳಿಗಳ ರಚನೆಗೆ ಅವಕಾಶವನ್ನು ಒದಗಿಸುತ್ತದೆ. ಈ ಮಂಡಳಿಗಳು ಕೆಲವೊಂದು ಶಾಸಕಾಂಗ,ನ್ಯಾಯಾಂಗ ಮತ್ತು ಆಡಳಿತಾತ್ಮಕ ಸ್ವಾಯತ್ತತೆಯನ್ನು ಹೊಂದಿರುತ್ತವೆ. ಈ ಮಂಡಳಿಗಳು ಭೂಮಿ,ಅರಣ್ಯ,ನೀರು,ಕೃಷಿ,ಆರೋಗ್ಯ,ನೈರ್ಮಲ್ಯ,ಉತ್ತರಾಧಿಕಾರ, ಮದುವೆ ಮತ್ತು ವಿಚ್ಛೇದನ ಇತ್ಯಾದಿಗಳಿಗೆ ಸಂಬಂಧಿಸಿದಂತೆ ತಮ್ಮದೇ ಆದ ನಿಯಮಗಳು ಮತ್ತು ನಿಬಂಧನೆಗಳನ್ನು ತರಬಹುದಾಗಿದೆ.
2019,ಆ.5ರಂದು ಲಡಾಖ್ ಅನ್ನು ಜಮ್ಮು-ಕಾಶ್ಮೀರದಿಂದ ಪ್ರತ್ಯೇಕಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ ಬಳಿಕ ವಿವಿಧ ಸ್ಥಳೀಯ ಸಂಘಟನೆಗಳು ಇಂತಹುದೇ ಬೇಡಿಕೆಗಳನ್ನು ಮುಂದಿಟ್ಟಿವೆ. ಕೇಂದ್ರಾಡಳಿತ ಪ್ರದೇಶವನ್ನಾಗಿಸಿದ ಬಳಿಕ ಲಡಾಖ್ನ ಸಂಸ್ಕೃತಿ ಮತ್ತು ಹಕ್ಕುಗಳ ಸುರಕ್ಷತೆಗಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳದ್ದಕ್ಕಾಗಿ ಪ್ರದೇಶದಲ್ಲಿಯ ಪ್ರಮುಖ ನಾಗರಿಕ ಸಂಸ್ಥೆಗಳು ಬಿಜೆಪಿಯನ್ನು ಟೀಕಿಸಿವೆ.
ಮೇ ಅಂತ್ಯದಲ್ಲಿ ಅಥವಾ ಜೂನ್ ಆರಂಭದಲ್ಲಿ ತಾನು ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳುವುದಾಗಿ ತಿಳಿಸಿದ ವಾಂಗ್ಚುಕ್,ಎ.26ರಿಂದ ಉಪವಾಸವನ್ನು ಆರಂಭಿಸಲು ತಾನು ಯೋಜಿಸಿದ್ದೆ. ಆದರೆ ಎ.26ರಂದು ವೈ-20 ಪೂರ್ವ ಶೃಂಗಸಭೆಯು ಲಡಾಖ್ನಲ್ಲಿ ನಡೆದ ಕಾರಣ ದೇಶದ ಉತ್ತಮ ಹಿತಾಸಕ್ತಿಗಳಾಗಿ ತಾನು ಅದನ್ನು ಮುಂದೂಡಿದ್ದೆ ಎಂದು ಹೇಳಿದರು.







