ಒಂದು ಇಂಜಿನನ್ನು ಜನರು ಗುಜಿರಿಗೆ ಹಾಕಲಿದ್ದಾರೆ: ಮಾಜಿ ಸಿಎಂ ವೀರಪ್ಪ ಮೊಯ್ಲಿ

ಮಂಗಳೂರು: ಬಿಜೆಪಿಯ ಡಬಲ್ ಇಂಜಿನ್ ಸರಕಾರದ ಪೈಕಿ ಕರ್ನಾಟಕದ ಒಂದು ಇಂಜಿನನ್ನು ಜನರು ಶೀಘ್ರದಲ್ಲೇ ಗುಜಿರಿಗೆ ಹಾಕಲಿದ್ದಾರೆ. 2024ರ ವೇಳೆಗೆ ಇನ್ನೊಂದು ಎಂಜಿನ್ ಕೂಡಾ ಗುಜಿರಿಯಾಗಲಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಕಾಂಗ್ರೆಸ್‌ನ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಇಂಜಿನ್ ನಲ್ಲಿ ರಾಜ್ಯ ನಡೆಯುವುದಿಲ್ಲ. ಹೀಗಾಗಿ ಡಬಲ್ ಇಂಜಿನ್ ಅಳವಡಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಆರು ಗ್ಯಾರಂಟಿಯನ್ನು ಅನುಷ್ಠಾನಗೊಳಿಸಲು ಯಾವುದೇ ತೊಂದರೆಯಾಗದು ಎಂದರು.
ರಾಜ್ಯ ಮತ್ತು ದೇಶವನ್ನು ಬಿಜೆಪಿ ಸರಕಾರ ಸಾಲದಲ್ಲಿ ಮುಳುಗಿಸಿದೆ. ದೇಶವನ್ನು ಬಿಜೆಪಿ ಸರಕಾರ ದಿವಾಳಿಯ ಅಂಚಿಗೆ ತಳ್ಳಿದೆ. ಮುಖ್ಯ ಮಂತ್ರಿ ತೆರೆಮರೆಗೆ ಸರಿದಿದ್ದಾರೆ. ಒಂದು ರಾಜ್ಯ ಚುನಾವಣೆಗೆ ಬೇಕಾಗಿ ಪ್ರಧಾನಿ ಮೋದಿಯಂತೆ ಈ ವರೆಗೆ ಯಾವ ಪ್ರಧಾನಿಯು ಕೆಲಸ ಮಾಡಿಲ್ಲ. ಮೋದಿ 20 ಮೀಟಿಂಗ್ ಮಾಡಿದ್ದಾರೆ. ಈ ವಿಚಾರದಲ್ಲಿ ಅವರು ದಾಖಲೆ ನಿರ್ಮಿಸಿದ್ದಾರೆ. ಅವರಿಗೆ ಸೋಲಿನ ಭಯ ಆವರಿಸಿದೆ ಎಂದರು.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ವೋಟ್ ಕೊಟ್ಟರೆ ಕರ್ನಾಟಕದಲ್ಲಿ ದೊಂಬಿ ಏಳುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಗುಜರಾತ್‌ನಲ್ಲಿ ಗಡಿಪಾರಾದ ವ್ಯಕ್ತಿಯಿಂದ ಇನ್ನೆನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಕನ್ನಡದ ಅಸ್ಮಿತೆಯನ್ನು ನಾಶ ಮಾಡುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ಬಿಜೆಪಿ ಹಾಳು ಮಾಡಿದೆ ಎಂದು ಹೇಳಿದರು.
ಹಿಂದೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವನ್ನು ಪ್ರಧಾನಿ ಮೋದಿ 10 ಪರ್ಸೆಂಟ್ ಸರಕಾರ ಎಂದು ಗೇಲಿ ಮಾಡಿದ್ದರು. ಆದರೆ ಈಗ ರಾಜ್ಯದಲ್ಲಿ ಬಿಜೆಪಿಯ 40 ಪರ್ಸೆಂಟ್ ಸರಕಾರ ಇದೆ ಎಂದರು.
ಬಿಜೆಪಿ ಆಡಳಿತದಿಂದ ದೇಶದಲ್ಲಿ ಪ್ರಜಾಫ್ರಭುತ್ವದ ಬೇರುಗಳು ಶಿಥಿಲವಾಗುತ್ತಿದೆ. ಪ್ರಜಾಪ್ರಭುತ್ವ ಮೂಲಕ ಆಯ್ಕೆಯಾದ ಸರಕಾರವನ್ನು ಬಿಜೆಪಿ ಕದಿಯುತ್ತಿದೆ. ಎಲ್ಲರಿಗೂ ಬಿಜೆಪಿಯವರು ಬತ್ತಿ ಇಡುತ್ತಿದ್ದಾರೆ. ಮುಂದೆ ಪ್ರಧಾನಿ ನರೇಂದ್ರ ಮೋದಿ ಪೀಠವನ್ನು ಬೆಂಕಿ ಆವರಿಸಲಿದೆ ಎಂದರು.
ಸುಪ್ರೀಂ ಕೋರ್ಟ್, ಭದ್ರತಾ ಸಂಸ್ಥೆಗಳ ಮೇಲೆ ಬಿಜೆಪಿ ಸವಾರಿ ಮಾಡುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ನಾಶ ಮಾಡುತ್ತಿದೆ. ಇದನ್ನು ತಡೆಯದಿದ್ದರೆ ಮುಂದೆ ಪ್ರಜಾಪ್ರಭುತ್ವದ ಬೆಳಕು ಕಣ್ಮರೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಲಿದೆ. ಬಿಜೆಪಿಗೆ ಹೆಚ್ಚೆಂದರೆ 30 ಸೀಟ್ ಸಿಗಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ವೀಕ್ಷಕರಾದ ಡಾ. ಅಜಯ್ ಕುಮಾರ್, ಚರಣ್ ಸಿಂಗ್ ಸಪ್ರಾ, ವಿಧಾನ ಪರಿಷತ್ ಸದಸ್ಯರಾದ ಡಾ.ಮಂಜುನಾಥ ಬಂಡಾರಿ, ಹರೀಶ್ ಕುಮಾರ್, ಮಾಜಿ ರಾಜ್ಯ ಸಭಾ ಸದಸ್ಯ ಬಿ. ಇಬ್ರಾಹೀಂ, ಮಾಜಿ ಮೇಯರ್ ಶಶಿಧರ ಹೆಗ್ದೆ, ಮಾಜಿ ವಿಪ ಸದಸ್ಯ ಐವಾನ್ ಡಿ ಸೋಜ ಮತ್ತಿತರು ಉಪಸ್ಥಿತರಿದ್ದರು.
ನನ್ನಷ್ಟು ಧೈರ್ಯ ಯಾರಿಗುಂಟು ?
ಬಜರಂಗದಳ ನಿಷೇಧ ಪ್ರಸ್ತಾವನೆ ಇಲ್ಲ ಎಂದು ನೀವು ಹೇಳಿಕೆ ನೀಡಿದ್ದೀರಿ. ಆದರೆ ಕಾಂಗ್ರೆಸ್‌ನ ಇತರ ನಾಯಕರು ಪ್ರಣಾಳಿಕೆಯಲ್ಲಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗಿರುವಾಗ ನಿಮ್ಮ ಹೇಳಿಕೆ ಗೊಂದಲವನ್ನುಂಟು ಮಾಡಿದೆ ಎಂದು ಸುದ್ದಿಗಾರರು ಮೊಯ್ಲಿ ಅವರ ಗಮನ ಸೆಳೆದಾಗ ಕಾಂಗ್ರೆಸ್ ನಲ್ಲಿ ನನ್ನಷ್ಟು ಧೈರ್ಯ ಯಾರಿಗೆ ಇದೆ ಎಂದು ಮೊಯ್ಲಿ ಪ್ರಶ್ನಿಸಿದರು.
ನಾನು ಒನ್ ಮ್ಯಾನ್ ಆರ್ಮಿ. ಹಿಂದೆ ಕ್ಯಾಪಿಟೇಷನ್ ಶುಲ್ಕ ವಸೂಲಿ ಮಾಡುವವರನ್ನು, ಭೂಮಾಲಕರನ್ನು, ಮದ್ಯದ ದೊರೆಗಳನ್ನು ಅಂದು ಮುಖ್ಯ ಮಂತ್ರಿಯಾಗಿದ್ದಾಗ ಎದುರು ಹಾಕಿಕೊಂಡಿದ್ದೆ. ಈಗಲೂ ಯಾರಿಗೂ ಹೆದರುವುದಿಲ್ಲ ಎಂದರು.