ನೀವು ಸ್ವಲ್ಪ ಹೆದರಿದರೆ, ಬಿಜೆಪಿಯವರು ಸಂಪೂರ್ಣವಾಗಿ ಹೆದರಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ
''ನನ್ನ ಮಗ ಪ್ರಿಯಾಂಕ್ ಎಂದಿಗೂ ಹೆದರುವವನಲ್ಲ''

ರಾಯಚೂರು, ಮೇ 4: ‘ಒಬ್ಬ ಪ್ರಧಾನಿ ಶಾಸಕರನ್ನು ಸೋಲಿಸಲು ಎಷ್ಟು ಊರೂರು ಅಲೆದಾಡುತ್ತಿದ್ದಾರೆ. ಎಷ್ಟು ಧೈರ್ಯ ಕಳೆದುಕೊಂಡಿದ್ದಾರೆಂದು ನೀವೆ ಊಹಿಸಿಕೊಳ್ಳಿ. ಇವರ ಕಾಲದಲ್ಲಿ ಬಡವ ಬಡವನಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಹೀಗಾಗಿ ಈ ತಾರತಮ್ಯ ಹೋಗಲಾಡಿಸಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಗುರುವಾರ ಜಿಲ್ಲೆಯ ಸುರಪುರ ಕ್ಷೇತ್ರದಲ್ಲಿ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನೀವು ಸ್ವಲ್ಪ ಹೆದರಿದರೆ, ಬಿಜೆಪಿಯವರು ಸಂಪೂರ್ಣವಾಗಿ ಹೆದರಿಸುತ್ತಾರೆ. ಬಿಜೆಪಿ ಅವರು ಬೇಕಂತಲೇ ಗಲಾಟೆ ಮಾಡಿಸುತ್ತಾರೆ. ಈ ಚುನಾವಣೆ ಬಹಳ ಮಹತ್ವದ ಚುನಾವಣೆ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ರಾಜಾ ವೆಂಕಟ್ಟಪ್ಪ ನಾಯಕ್‍ರಿಗೆ ಈ ಸಲ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಕರೆ ನೀಡಿದರು.
‘ನಾನು ಕರ್ನಾಟಕದ ಮಣ್ಣಿನ ಮಗ, ಇದು ನನ್ನ ಜನ್ಮಭೂಮಿ. ಇಂದು ನಾನು ಮೋದಿಯವರಿಗೆ ಕೇಳ್ತಾ ಇದ್ದೀನಿ, ಇದು ನನ್ನ ಜಿಲ್ಲೆ ಎಂದು ನಿಮಗೆ ಹೇಳಕ್ಕೆ ಬಯಸುತ್ತೇನೆ. ಈ ಭಾಗದಿಂದ 50 ವರ್ಷದಿಂದ ನಾನು ಜನರಿಂದ ಆರಿಸಿ ಬರುತ್ತಿದ್ದೀನಿ. ಇಂದು ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಗಾಂಧಿ, ನೆಹರೂ, ಪಟೇಲ್ ಹಾಗೂ ಮೌಲಾನ ಆಝಾದ್ ಈ ಸ್ಥಾನವನ್ನು ಅಲಂಕರಿಸಿದ್ದರು. ಆ ಸ್ಥಾನ ಇಂದು ನಿಮ್ಮೆಲ್ಲರ ಆಶೀವಾರ್ದದಿಂದ ಇಂದು ಈ ಸ್ಥಾನದಲ್ಲಿ ಇದ್ದೇನೆ. ಹಾಗಾಗಿ ನೀವು ಅದರ ಮಾರ್ಯದೆ ಉಳಿಸಬೇಕು’ ಎಂದು ಅವರು ಮನವಿ ಮಾಡಿದರು.
‘ಈ ಭಾಗದ ಏಳು ಜಿಲ್ಲೆಯ ಜನಗಳಿಗೆ, ಸಂವಿಧಾನಕ್ಕೆ ತಿದ್ದುಪಡಿ ತಂದು ಹಲವು ದಶಕಗಳ ಹೋರಾಟದ ಫಲವಾಗಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ನೀಡಿದ 371 (ಜೆ) ಮೀಸಲಾತಿ ಯಿಂದ ಕಲ್ಯಾಣ ಕರ್ನಾಟಕ ಭಾಗದ ಜನರು ಹಲವು ಉನ್ನತ ಹುದ್ದೆ ಹಿಡಿಯಲು ಸಹಕಾರಿಯಾಗಿದೆ. ಇದರಿಂದ ಹಲವರು ಪಿಎಸ್ಸೈ, ಎಸಿ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ವಿವರಿಸಿದರು.
‘ಅಮಿತಾ ಶಾ ಪ್ರಚಾರಕ್ಕೆ ಬಂದಿದ್ದಾರೆ, ಏನು ಕೊಡುಗೆ ಕೊಟ್ಟಿದ್ದಾರೆ ಈ ರಾಜ್ಯಕ್ಕೆ? ಯಾವುದೇ ಹೊಸ ಉದ್ಯಮದ ಸ್ಥಾಪನೆಯಾಗಿಲ್ಲ, ಜನರಿಗೆ ಉದ್ಯೋಗ ಕೊಟ್ಟಿಲ್ಲ ಎಂಬುದು ಡಬಲ್ ಎಂಜಿನ್ ಸರಕಾರದ ಸಾಧನೆ. ಈ ಬಿಜೆಪಿ ಸರಕಾರದಲ್ಲಿ ಜನರಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ, ಕೇವಲ ಬಿಜೆಪಿಯ ಶಾಸಕರಿಗೆ ಮತ್ತು ಸಚಿವರಿಗೆ ಮಾತ್ರ ಅನುಕೂಲವಾಗಿದೆ ಎಂದು ದೂರಿದರು.
‘ಪ್ರಿಯಾಂಕ್ ಖರ್ಗೆಗೆ ಚುನಾವಣೆ ಆಯೋಗ ನೋಟಿಸ್ ನೀಡಿದೆ. ಅವ ಎಂದಿಗೂ ಹೆದರುವವನು ಅಲ್ಲ. ಅವ ಧೈರ್ಯವಂತ, ತತ್ವ, ನೀತಿ ಸಿದ್ದಾಂತದ ಮೇರೆಗೆ ಬದುಕುವವನು ಎಂದ ಮಲ್ಲಿಕಾರ್ಜುನ ಖರ್ಗೆ, ‘ನಮ್ಮ ‘ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಪ್ರಣಾಳಿಕೆ ಘೋಷಣೆ ಆಗಿದೆ. ಪಕ್ಷದ ಪ್ರಮುಖ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. 5 ಘೋಷಣೆಗಳನ್ನು ಜಾರಿಗೆ ತರುವುದು ನನ್ನ ಗ್ಯಾರಂಟಿ. ನಾವು ರಾಜ್ಯದಲ್ಲಿ ಗೆಲ್ಲುವುದು ಖಾತ್ರಿಯಾಗಿದೆ ಎಂದು ಹೇಳಿದರು.







