ಮಂಗಳೂರು ಮೂಲಕ ‘ಹಜ್ ಯಾತ್ರೆ’ ರದ್ದತಿಗೆ ವ್ಯಾಪಕ ವಿರೋಧ

ಮಂಗಳೂರು, ಮೇ 4: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಸಕ್ತ ಸಾಲಿನ ಹಜ್ ಯಾತ್ರೆಗೆ ಖೊಕ್ ನೀಡುವ ಸಾಧ್ಯತೆ ನಿಚ್ಛಳವಾಗಿರುವ ಮಧ್ಯೆಯೇ ವ್ಯಾಪಕ ವಿರೋಧವೂ ವ್ಯಕ್ತವಾಗಿದೆ.
ಈ ಮಧ್ಯೆ ಕೇಂದ್ರ ಹಜ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕುಟ್ಟಿ ಗುರುವಾರ ಮಂಗಳೂರಿನಲ್ಲಿರುವ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಚೇರಿಗೆ ಭೇಟಿ ನೀಡಿ ಅಹವಾಲು ಆಲಿಸಿದ್ದಾರೆ. ಕಮಿಟಿಯ ಪದಾಧಿಕಾರಿಗಳು ಹಜ್ ಯಾತ್ರಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
ಆರಂಭದಲ್ಲಿ ಕರಾವಳಿಯ ಹಜ್ ಯಾತ್ರಿಕರು ಬೆಂಗಳೂರು ಮೂಲಕ ಹಜ್ ಯಾತ್ರೆಗೆ ತೆರಳುತ್ತಿದ್ದರು. ಸಾಕಷ್ಟು ಮನವಿಗಳ ಬಳಿಕ ಮಂಗಳೂರಿನಿಂದ ಯಾತ್ರೆ ಆರಂಭಿಸಲಾಗಿತ್ತು. ಅಂದರೆ 2009ರ ಅಕ್ಟೋಬರ್ 25ರಂದು ಅಂದಿನ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮಂಗಳೂರು ಮೂಲಕ ಹಜ್ ಯಾತ್ರೆಗೆ ಚಾಲನೆ ನೀಡಿದ್ದರು. ಅಷ್ಟೇ ಅಲ್ಲ, ‘ಮುಂದಿನ ವರ್ಷ ಮಂಗಳೂರಿನಲ್ಲಿ ಹಜ್ ಯಾತ್ರಿಗಳ ಸುಸಜ್ಜಿತ ಕೇಂದ್ರವಾಗಿ ಪರಿವರ್ತಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದ್ದರು. ಜತೆಗೆ ಅಂದು ರಾಜ್ಯ ವಕ್ಫ್ ಸಚಿವರಾಗಿದ್ದ ಮುಮ್ತಾಝ್ ಅಲಿ ಖಾನ್ ‘ಹಜ್ ಘರ್’ ನಿರ್ಮಿಸಲಾಗುವುದು ಎಂದಿದ್ದರಲ್ಲದೆ ರಾಜ್ಯಕ್ಕೆ ಹಜ್ ಯಾತ್ರಾರ್ಥಿಗಳ ಕೋಟಾ ಹೆಚ್ಚಿಸಬೇಕು, ವಿಐಪಿ ಕೋಟಾ ನಿಲ್ಲಿಸಬೇಕು, ಖಾಸಗಿ ಹಜ್ ಯಾತ್ರೆಯ ವ್ಯವಸ್ಥೆ ಮಾಡುವವರಿಂದ ಆಗುವ ತೊಂದರೆ ತಪ್ಪಿಸಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಆದರೆ ಈ ಭರವಸೆ, ಆ ಆಗ್ರಹ ಎಲ್ಲವೂ ಮರೀಚಿಕೆಯಾಗುತ್ತಲೇ ಬಂದಿವೆ. ವರ್ಷದಿಂದ ವರ್ಷಕ್ಕೆ ಮಂಗಳೂರಿ ನಿಂದ ಹಜ್ ಯಾತ್ರೆ ಕೈಗೊಳ್ಳುವವರ ಸಂಖ್ಯೆ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ. ಪ್ರತೀ ವರ್ಷವೂ ಹಜ್ ಭವನ ನಿರ್ಮಿಸುವುದಾಗಿ ಸಂಬಂಧಪಟ್ಟ ಸಚಿವರು ಭರವಸೆ ನೀಡಿದ್ದೂ ಕೂಡ ಹುಸಿಯಾಗಿವೆ.
ಮಂಗಳೂರು ವಿಮಾನ ನಿಲ್ದಾಣದ ಮೂಲಕ 2009ರಿಂದ 2019ರವರೆಗೆ ದ.ಕ., ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತಿತರ ಜಿಲ್ಲೆಗಳ 8,324 ಮಂದಿ ಯಾತ್ರೆ ಕೈಗೊಂಡಿದ್ದರು. 2020, 2021ರಲ್ಲಿ ಕೊರೋನ ಹಿನ್ನೆಲೆಯಲ್ಲಿ ಯಾತ್ರೆಗೆ ಅವಕಾಶವಿರಲಿಲ್ಲ. 2022ರಲ್ಲಿ ಬೆಂಗಳೂರು ಮೂಲಕ ಯಾತ್ರೆ ಕೈಗೊಳ್ಳಲಾ ಗಿತ್ತು. ಈ ಬಾರಿಯೂ ಮತ್ತೆ ಯಾವ ವಿಮಾನ ನಿಲ್ದಾಣದಿಂದ ಪ್ರಯಾಣ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ.
ಸರಕಾರದ ಈ ನಿಲುವಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹಜ್ ಭವನವಂತೂ ಕನಸಿನ ಮಾತಾಗಿದೆ. ಇನ್ನು ಮಂಗಳೂರು ಮೂಲಕ ಹಜ್ ಯಾತ್ರೆಯನ್ನು ಶಾಶ್ವತವಾಗಿ ರದ್ದುಗೊಳಿಸಬಹುದೇನೋ ಎಂಬ ಆತಂಕ ವ್ಯಕ್ತವಾ ಗಿದೆ. ಈ ನಿಟ್ಟಿನಲ್ಲಿ ಕರಾವಳಿಯ ಮುಸ್ಲಿಂ ಸಂಘಟನೆಗಳು ಒಗ್ಗೂಡಿ ರಾಜ್ಯ ಮತ್ತು ಕೇಂದ್ರ ಹಜ್ ಕಮಿಟಿಯ ಮೇಲೆ ಒತ್ತಡ ಹೇರಲು ಸಿದ್ಧತೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
"ನಾವು ಮಂಗಳೂರು ಮೂಲಕ ಹಜ್ ಯಾತ್ರೆ ಕೈಗೊಳ್ಳಲು ಅರ್ಜಿ ಹಾಕಿದ್ದೆವು. ಇದೀಗ ಬೆಂಗಳೂರು ಅಥವಾ ಕೇರಳದ ಕಣ್ಣೂರು ಮೂಲಕ ಹಜ್ ಯಾತ್ರೆಗೆ ಅವಕಾಶ ಎಂಬ ಮಾತು ಕೇಳಿ ಬರುತ್ತಿದೆ. ಇದು ಸರಿಯಾದ ಕ್ರಮವಲ್ಲ. ಇದರಿಂದ ನಮ್ಮಂತಹ ಹಜ್ ಯಾತ್ರಿಕರ ನೆಮ್ಮದಿ ಕೆಟ್ಟಿವೆ. ಬೆಂಗಳೂರು ಅಥವಾ ಕಣ್ಣೂರು ಮೂಲಕ ಯಾನ ಆರಂಭಿಸುವುದಾದರೆ ಎರಡ್ಮೂರು ದಿನ ನಾವು ಲಗ್ಗೇಜ್ ಮತ್ತು ಕುಟುಂಬ ಸಮೇತ ಆ ಕಡೆ ತೆರಳ ಬೇಕಿದೆ. ಇದರಿಂದ ಅಧಿಕ ವೆಚ್ಚ, ಸಮಯ ವ್ಯಯವಾಗಲಿದೆ. ಕುಟುಂಬದ ಇತರ ಸದಸ್ಯರಿಗೂ ಸಮಸ್ಯೆ. ಈಗಾಗಲೆ ನಾವು ಎರಡು ಹಂತದ ಹಣ ಪಾವತಿಸಿದ್ದೇವೆ. ಮೂರನೇ ಹಂತದ ಹಣ ಎಷ್ಟು, ಯಾವಾಗ ಪಾವತಿಸಬೇಕು, ಎಲ್ಲಿಂದ ತೆರಳುವುದು ಇತ್ಯಾದಿ ಯಾವ ಮಾಹಿತಿಯೂ ನಮಗೆ ಈವರೆಗೆ ಬಂದಿಲ್ಲ. ಒಟ್ಟಿನಲ್ಲಿ ಮಂಗಳೂರು ಮೂಲಕ ಯಾತ್ರೆಗೆ ನಿರ್ಧರಿಸಿರುವವರು ಗೊಂದಲ, ಆತಂಕದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಹಜ್ ಕಮಿಟಿಯ ಮುಖ್ಯಸ್ಥರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ನಿವಾರಿಸಬೇಕಿದೆ. ಸುಸೂತ್ರವಾಗಿ ಮಂಗಳೂರು ಮೂಲಕವೇ ಹಜ್ ಯಾತ್ರೆಗೆ ಅವಕಾಶ ಕಲ್ಪಿಸಬೇಕಿದೆ".
-ಮುಹಮ್ಮದಲಿ ಕಮ್ಮರಡಿ/ಬಶೀರ್ ಬೈಕಂಪಾಡಿ (2023ನೆ ಸಾಲಿನಲ್ಲಿ ಹಜ್ ಯಾತ್ರೆಗೆ ಆಯ್ಕೆಗೊಂಡವರು)
"ಈ ಬಾರಿ ದೇಶದಲ್ಲಿ ಒಟ್ಟು 25 ಎಂಬಾರ್ಕೇಶನ್ ಸೆಂಟರ್‌ಗಳನ್ನು ಗುರುತಿಸಲಾಗಿದೆ. ಆ ಪೈಕಿ ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರು ಕೂಡ ಇದೆ. ಆದರೆ ಮಂಗಳೂರು ಮೂಲಕ ಪ್ರಯಾಣ ಬೆಳೆಸುವವರ ಸಂಖ್ಯೆ ತೀರಾ ಕಡಿಮೆಯಿದೆ. ಹಾಗಾಗಿ ಖಾಸಗಿ ವಿಮಾನ ಕಂಪೆನಿಗಳು ಮಂಗಳೂರು ಬದಲು ಬೆಂಗಳೂರು ಅಥವಾ ಕಣ್ಣೂರು ಮೂಲಕ ಪ್ರಯಾಣಿಸಲು ಸೂಚಿಸಿರಬಹುದು. ಈ ಬಗ್ಗೆ ತಾನು ಪರಿಶೀಲಿಸಿ ಕ್ರಮ ಕೈಗೊಳ್ಳುವೆ".
-ಹಾಜಿ ಅಬ್ದುಲ್ಲಾ ಕುಟ್ಟಿ, ಅಧ್ಯಕ್ಷರು ಕೇಂದ್ರ ಹಜ್ ಕಮಿಟಿ
ಕೇಂದ್ರ ಹಜ್ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕುಟ್ಟಿಗೆ ಮನವಿ ಸಲ್ಲಿಸಿದ ನಿಯೋಗದಲ್ಲಿ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಅಬ್ದುಲ್ ಅಝೀಝ್ ಬೈಕಂಪಾಡಿ, ಕಮಿಟಿಯ ಪದಾಧಿಕಾರಿ ಗಳಾದ ಮುಹಮ್ಮದ್ ಬಪ್ಪಳಿಗೆ, ಸಿಎಂ ಹನೀಫ್, ಬಶೀರ್ ಜೆಪ್ಪು, ರಿಯಾಝುದ್ದೀನ್ ಬಂದರ್, ಇಬ್ರಾಹೀಂ ಕೊಣಾಜೆ, ಹಸನ್ ಬೆಂಗರೆ ಮತ್ತಿತರರಿದ್ದರು.
ವರ್ಷಂಪ್ರತಿ ಮಂಗಳೂರಿನಿಂದ ಹಜ್ ಯಾತ್ರೆ ಕೈಗೊಂಡವರ ವಿವರ
1. 2009: 670
2. 2010: 867
3. 2011: 810
4. 2012: 1050
5. 2013: 966
6. 2014: 731
7. 2015: 670
8. 2016: 610
9. 2017: 769
10.2018: 434
11.2019: 747
12. 2020: (ಕೊರೋನ ಹಿನ್ನೆಲೆಯಲ್ಲಿ ಹಜ್ ಯಾತ್ರೆ ರದ್ದು)
13. 2021: (ಕೊರೋನ ಹಿನ್ನೆಲೆಯಲ್ಲಿ ಹಜ್ ಯಾತ್ರೆ ರದ್ದು)
14. 2022 : (ಬೆಂಗಳೂರು ಮೂಲಕ)
15: 2023: ?