ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗೆ ನಾವೇ ಗ್ಯಾರಂಟಿ: ದಿನೇಶ್ ಹೆಗ್ಡೆ

ಕುಂದಾಪುರ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಬಗ್ಗೆ ಬಿಜೆಪಿಗರು ಟೀಕಿಸುತ್ತಿದ್ದು ಈ ಐದು ಭರವಸೆಗಳನ್ನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಅನುಷ್ಠಾನ ಮಾಡಲಿದೆ. ಇದಕ್ಕೆ ನಾವೇ ಗ್ಯಾರೆಂಟಿ. ಇದು ಸುಳ್ಳಾದರೆ ಮುಂಬರುವ ಯಾವುದೇ ಚುನಾವಣೆಗೆ ಮತ ಕೇಳಲು ಹೋಗಲ್ಲ. ಒಂದೊಮ್ಮೆ ನಮ್ಮ ಸರಕಾರ ಪ್ರಥಮ ಕ್ಯಾಬಿನೆಟ್‌ನಲ್ಲಿ ಭರವಸೆಯಂತೆ ನಡೆದುಕೊಂಡರೆ ಯಾವುದೇ ಚುನಾವಣೆಗೆ ಮತದಾರರ ಬಳಿ ಮತ ಯಾಚನೆಗೆ ಬರುವುದಿಲ್ಲ ಎಂದು ಬಿಜೆಪಿಗರು ಹೇಳಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.
ಕುಂದಾಪುರದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇನ್ನೂ ನೆನಗುದಿಗೆ ಬಿದ್ದಿದೆ. ಸಿಆರ್‌ಝಡ್, 94ಸಿ, 94ಸಿಸಿ, ಅಕ್ರಮ ಸಕ್ರಮ ಸಮಸ್ಯೆಗಳಿವೆ. ಕುಂದಾಪುರದಲ್ಲಿ ಆರ್‌ಟಿಓ ಕಛೇರಿ ಬೇಡಿಕೆ ಇದೆ. ಕೋಡಿ ಕನ್ಯಾಣ ಭಾಗದಲ್ಲಿ ಹಕ್ಕುಪತ್ರ ಸಮಸ್ಯೆ, ನದಿ ದಂಡೆಯ ಸಮಸ್ಯೆ, ಗಂಗೊಳ್ಳಿ- ಕುಂದಾಪುರ ಸೇತುವೆ ಬೇಡಿಕೆ, 44 ವರ್ಷಗಳಾದರೂ ಬಾಕಿ ಇರುವ ವರಾಹಿ ನೀರಾವರಿ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಾನು ಶಾಸಕನಾಗಿ ಆಯ್ಕೆಯಾದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಜರಂಗದಳ ನಿಷೇಧದ ಕುರಿತು ಸ್ಪಷ್ಟವಾಗಿ ಹೇಳಿಲ್ಲ. ಸೋಲಿನ ಮುನ್ಸೂಚನೆಯಿಂದ ಬಿಜೆಪಿಗರು ಹತಾಶ ರಾಗಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಹೇಳಲು ಬೇರೆ ವಿಷಯಗಳಿಲ್ಲ. ಚುನಾವಣೆಯ ಲಾಭ ಪಡೆದುಕೊಳ್ಳಲು ಈ ವಿಚಾರ ಮುನ್ನೆಲೆಗೆ ತಂದು ಓಟು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕುಂದಾಪುರ ಕ್ಷೇತ್ರದಲ್ಲಿ ಹಿಂದೂ ಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಹಲವರು ತಮಗಾದ ಅನ್ಯಾಯ ದಿಂದ ಬೇಸತ್ತು ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ಕಾಂಗ್ರೆಸ್ ಪಕ್ಷ ಹಿಂದು ವಿರೋಧಿಯಲ್ಲ, ನಮ್ಮ ಅಭ್ಯರ್ಥಿ ಮೊಳಹಳ್ಳಿ ದಿನೇಶ ಹೆಗ್ಡೆ ಅವರು ಧಾರ್ಮಿಕ ವ್ಯವಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಇಡೀ ಕ್ಷೇತ್ರದ ಜನರಿಗೆ ದಿನೇಶ ಹೆಗ್ಡೆ ಅವರ ವ್ಯಕ್ತಿತ್ವದ ಅರಿವಿದೆ. ಪ್ರತಿ ಚುನಾವಣೆಯಲ್ಲಿಭಾವನಾತ್ಮಕ ವಿಷಯಗಳ ನ್ನಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತದೆ. ಹಿಂದುತ್ವ, ಹಿಂದು ಸಂಘಟನೆಯ ಬಗ್ಗೆ ಬಿಜೆಪಿಗೆ ಅಷ್ಟೊಂದು ಅಭಿಮಾನ ಇದ್ದರೆ ಬೇರೆಬೇರೆ ಕ್ಷೇತ್ರಗಳಲ್ಲಿ ಹಿಂದೂ ನಾಯಕರುಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ ಅವರಿಗೆ ಏಕೆ ಬೆಂಬಲ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಕುಂದಾಪುರ ಕ್ಷೇತ್ರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭ್ಯರ್ಥಿಯ ಪರವಾಗಿ ಮತ ಕೇಳುತ್ತಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹೆಸರು ಹೇಳಿ ಮತ ಕೇಳಲಾಗುತ್ತಿದೆ ಎಂದು ಅವರು ದೂರಿದರು.
ಈ ಸಂದರ್ಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್, ಮುಖಂಡರಾದ ಕೃಷ್ಣದೇವ ಕಾರಂತ ಕೋಣಿ, ವಿನೋದ್ ಕ್ರಾಸ್ತಾ, ಅಶೋಕ್ ಪೂಜಾರಿ ಬೀಜಾಡಿ ಉಪಸ್ಥಿತರಿದ್ದರು.