ಮೇ 10ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಈ ವರ್ಷದ ಮೊದಲ ಚಂಡಮಾರುತ: ದೃಢಪಡಿಸಿದ ಐಎಂಡಿ

ಹೊಸದಿಲ್ಲಿ,ಮೇ 4: ಒಂದು ವಾರದ ಅನಿಶ್ಚಿತತೆಯ ಬಳಿಕ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಮೇ 6ರಂದು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆಯನ್ನು ಗುರುವಾರ ದೃಢಪಡಿಸಿದೆ. ಚಂಡಮಾರುತ ಪರಿಚಲನೆಯ ಪ್ರಭಾವದಿಂದಾಗಿ ಮೇ 7ರಂದು ಅದೇ ಪ್ರದೇಶದಲ್ಲಿ ವಾಯುಭಾರ ಕುಸಿತವುಂಟಾಗುವ ಮತ್ತು ನಂತರ ಮೇ 8ರಂದು ಆಗ್ನೇಯ ಬಂಗಾಳ ಕೊಲ್ಲಿಯ ಮೇಲೆ ಕೇಂದ್ರೀಕೃತವಾಗುವ ಸಾಧ್ಯತೆಗಳಿವೆ.
ಈ ಪ್ರದೇಶಗಳಲ್ಲಿ ಸಮುದ್ರವು ಪ್ರಕ್ಷುಬ್ಧವಾಗಿರುವ ಸಾಧ್ಯತೆಯಿರುವುದರಿಂದ ಆಗ್ನೇಯ ಬಂಗಾಳ ಕೊಲ್ಲಿಗೆ ಇಳಿಯದಂತೆ ಮೀನುಗಾರರಿಗೆ ಐಎಂಡಿ ಎಚ್ಚರಿಕೆ ನೀಡಿದೆ. ಪ್ರಸಕ್ತ ಮುನ್ಸೂಚನೆಯು ಚಂಡಮಾರುತದ ತೀವ್ರತೆ,ಅದರ ಜಾಡು ಅಥವಾ ಅದು ಭಾರತದ ಯಾವ ಪ್ರದೇಶದಲ್ಲಿ ಅಪ್ಪಳಿಸಬಹುದು ಎನ್ನುವುದನ್ನು ಗುರುತಿಸಿಲ್ಲ.
ಐಎಂಡಿ ಮುನ್ಸೂಚನೆಯಂತೆ ಮೇ 7ರಂದು ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಬಿರುಗಾಳಿಯಿಂದ ಕೂಡಿದ ಚದುರಿದಂತೆ ಹವಾಮಾನವಿರಲಿದೆ. ಪ್ರದೇಶದಲ್ಲಿ ಗಂಟೆಗೆ 50-60 ಕಿ.ಮೀ.ವೇಗದಲ್ಲಿ ಗಾಳಿಯ ಜೊತೆಗೆ ಮಳೆಯು ಬೀಳಲಿದೆ. ಮೇ 8ರಂದು ಚಂಡಮಾರುತವು ಮಧ್ಯ ಬಂಗಾಳ ಕೊಲ್ಲಿಯತ್ತ ಸಾಗಲಿದ್ದು,ಗಾಳಿಯ ವೇಗ ಪ್ರತಿ ಗಂಟೆಗೆ 60-70 ಕಿ.ಮೀ.ಗೆ ಹೆಚ್ಚಲಿದೆ. ಮೇ 9ರಂದು ಚಂಡಮಾರುತದ ಬಲ ವರ್ಧನೆಯಾದರೆ ಬಹುಶಃ ಅದು ಒಂದು ಪಥವನ್ನು ಅನುಸರಿಸುತ್ತದೆ. ಆದಾಗ್ಯೂ,ಭಾರತೀಯ ಭೂಪ್ರದೇಶದಲ್ಲಿ ಎಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎನ್ನುವುದನ್ನು ಮುನ್ಸೂಚನೆಯು ತಿಳಿಸಿಲ್ಲ.
ವಾಯುಭಾರ ಕುಸಿತ ರೂಪುಗೊಂಡ ಬಳಿಕ ಅದರ ಪಥ ಮತ್ತು ತೀವ್ರತೆಯ ವಿವರಗಳನ್ನು ಒದಗಿಸಲಾಗುವುದು. ಚಂಡಮಾರುತ ವ್ಯವಸ್ಥೆಯು ನಿರಂತರ ನಿಗಾದಲ್ಲಿದ್ದು,ನಿಯಮಿತವಾಗಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಐಎಂಡಿ ಮಹಾನಿರ್ದೇಶಕ ಡಾ.ಮೃತ್ಯುಂಜಯ ಮೊಹಾಪಾತ್ರಾ ತಿಳಿಸಿದ್ದಾರೆ.
ಚಂಡಮಾರುತ ಉಂಟಾದರೆ ಅದು ಈ ವರ್ಷದ ಅಂತಹ ಮೊದಲ ಪ್ರಕೃತಿ ವಿಕೋಪವಾಗಲಿದೆ. ಅಂತರರಾಷ್ಟ್ರೀಯ ನಿಯಮಗಳಂತೆ ಯೆಮೆನ್ ದೇಶವು ಅದನ್ನು ‘ಮೋಚಾ’ ಎಂದು ಹೆಸರಿಸಿದೆ. ಮೋಚಾ ಯೆಮೆನ್ನ ಬಂದರು ನಗರವಾಗಿದೆ.







