ಬಿಜೆಪಿಯ ಪ್ರಜಾ ಪ್ರಣಾಳಿಕೆ ತಳಸ್ಪರ್ಶಿ, ಅಭಿವೃದ್ಧಿಪರ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಮಂಗಳೂರು: ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಪ್ರಜಾ ಪ್ರಣಾಳಿಕೆಯಾಗಿ ಸಿದ್ಧಪಡಿಸಲಾಗಿದೆ. ಬೂತ್ ಮಟ್ಟದಿಂದ ತಳಸ್ಪರ್ಶಿಯಾಗಿ ಕಾರ್ಯಕರ್ತರು ಮತ್ತು ಸಾಮಾನ್ಯ ಜನರಿಂದ 6 ಲಕ್ಷಕ್ಕೂ ಹೆಚ್ಚಿನ ಸಲಹೆ ಸೂಚನೆಗಳನ್ನು ಪಡೆದು ಅವುಗಳನ್ನು ತಜ್ಞರ ಜತೆ ಚಚಿಜಿಸಿ ಬಳಿಕ ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿ ಚರ್ಚಿಸಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಪಕ್ಷದ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ನಗರದ ವಿಭಾಗ ಮಾಧ್ಯಮ ಕೇಂದ್ರದಲ್ಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಣಾಳಿಕೆ ಕುರಿತು ವಿವರವಾದ ಮಾಹಿತಿ ನೀಡಿದರು.
ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಕಳೆದ ಮೂರೂವರೆ ವರ್ಷದಲ್ಲಿ ರಾಜ್ಯದ ಬಿಜೆಪಿ ಸರಕಾರ ಮಾಡಿದ ಸಾಧನೆಗಳ ಪಟ್ಟಿ ಹಾಗೂ ಮುಂದಿನ ಅವಧಿಯಲ್ಲಿ ಮಾಡಲಿರುವ ಕಾರ್ಯಗಳ ಭರವಸೆಗಳ ಪಟ್ಟಿಯನ್ನು ನೀಡಲಾಗಿದೆ. ಅನ್ನ, ಅಭಯ, ಅಕ್ಷರ, ಆರೋಗ್ಯ, ಅಭಿವೃದ್ಧಿ ಮತ್ತು ಆದಾಯ- ಇವು ಪಕ್ಷದ ಮೂಲ ಚಿಂತನೆಗಳಾಗಿದ್ದು, ಇವುಗಳ ಆಧಾರದಲ್ಲಿಯೇ ಒಟ್ಟು 16 ಪ್ರಮುಖ ವಿಷಯಗಳು ಹಾಗೂ 103 ಭರವಸೆಗಳ ಪಟ್ಟಿಯನ್ನು ಪ್ರಣಾಳಿಕೆಯಲ್ಲಿ ಜನತೆಯ ಮುಂದಿಡಲಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಹೇಳಿದರು.
2031ಕ್ಕೆ ಕರ್ನಾಟಕ ರಾಜ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಆ ಸಂದರ್ಭಕ್ಕೆ ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿ 1 ಟ್ರಿಲಿಯನ್ ದಾಟಬೇಕು ಎಂಬ ಕಲ್ಪನೆ ಬಿಜೆಪಿಯದ್ದು. ಅದಕ್ಕೆ ಪೂರಕವಾಗಿ, ಭಾರತದ ಬೆಳವಣಿಗೆಯ ಚಾಲಕ ಶಕ್ತಿಗೆ (ಗ್ರೋಥ್ ಎಂಜಿನ್) ಕರ್ನಾಟಕವೇ ಎಂಜಿನ್ ಆಗಬೇಕು ಎಂಬ ಕಲ್ಪನೆ ನಮ್ಮದು. ಆ ನಿಟ್ಟಿನಲ್ಲಿ ಅನೇಕ ಆಯಾಮಗಳಿಂದ ಚಚಿಜಿಸಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ತಿಳಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವೈರುಧ್ಯ:ಇದಕ್ಕೆ ಭಿನ್ನವಾಗಿ ಮೇ 2ರಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಪ್ರಣಾಳಿಕೆಯನ್ನು ಗಮನಿಸಿದರೆ ಸಾಕಷ್ಟು ವೈರುಧ್ಯಗಳು ಕಾಣುತ್ತವೆ. ಅನ್ನಭಾಗ್ಯ ಯೋಜನೆಯನ್ನು ಎಲ್ಲರಿಗೂ ನಿಡುವುದಾಗಿ ಕನ್ನಡದ ಪ್ರಣಾಳಿಕೆಯಲ್ಲಿ ಹೇಳಿದ್ದರೆ, ಇಂಗ್ಲಿಷ್ ಪ್ರಣಾಳೀಕೆಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಎಂದು ಉಲ್ಲೇಖಿಸಲಾಗಿದೆ. ಇದೇ ರೀತಿ ಹಲವು ವೈರುಧ್ಯದ ಅಂಶಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ. ಕಾಂಗ್ರೆಸ್ ಜನರಿಗೆ ಯಾವ ರೀತಿ ಮೋಸ ಮಾಡುತ್ತದೆ ಎಂಬುದಕ್ಕೆ ಇದೇ ಉದಾಹರಣೆ.
ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಲಿಂಗಾ ಯತ ಸಮುದಾಯಕ್ಕೆ ಮಾಡಿದ ಅವಮಾನ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರು ಕಾಂಗ್ರೆಸ್ನಿಂದಲೇ ಮುಖ್ಯಮಂತ್ರಿಗಳಾಗಿದ್ದ ಲಿಂಗಾಯತ ನಾಯಕರು. ಸಿದ್ದರಾಮಯ್ಯ ಹೇಳಿಕೆ ಪ್ರಕಾರ ಅವರೂ ಭ್ರಷ್ಟರೇ? ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ಕೊಡಬೇಕು ಎಂದು ಕ್ಯಾಪ್ಟನ್ ಕಾರ್ಣಿಕ್ ಆಗ್ರಹಿಸಿದರು.







