ಝೆಲೆನ್ಸ್ಕಿಯನ್ನು ಕೊಲ್ಲದೆ ಬೇರೆ ಆಯ್ಕೆ ಉಳಿದಿಲ್ಲ: ರಷ್ಯಾದ ಮಾಜಿ ನಾಯಕ ಮೆಡ್ವೆಡೆವ್ ವಿವಾದಾತ್ಮಕ ಹೇಳಿಕೆ

ಮಾಸ್ಕೊ: ರಷ್ಯಾ ಪ್ರಧಾನಿ ವ್ಲಾದಿಮಿರ್ ಪುಟಿನ್‌ರ ಕ್ರೆಮ್ಲಿನ್ ನಿವಾಸದಲ್ಲಿ ಮೇಲೆ ಉಕ್ರೇನ್ ಡ್ರೋಣ್ ದಾಳಿ ನಡೆಸಿದ ನಂತರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಆತನ ಸಹಚರರನ್ನು ದೈಹಿಕವಾಗಿ ಮುಗಿಸದೆ ಬೇರೆ ಆಯ್ಕೆ ಉಳಿದಿಲ್ಲ ಎಂದು ರಷ್ಯಾ ಭದ್ರತಾ ಸಮಿತಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ ಎಂದು TASS ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಈವತ್ತಿನ ಭಯೋತ್ಪಾದಕ ದಾಳಿಯ ನಂತರ ಝೆಲೆನ್ಸ್ಕಿ ಹಾಗೂ ಆತನ ಸಹಚರರನ್ನು ದೈಹಿಕವಾಗಿ ಮುಗಿಸದೆ ಬೇರೆ ಆಯ್ಕೆ ಉಳಿದಿಲ್ಲ" ಎಂದು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಮೆಡ್ವೆಡೆವ್ ಹೇಳಿಕೊಂಡಿದ್ದಾರೆ. ಬೇಷರತ್ ಶರಣಾಗತಿಯ ಒಡಂಬಡಿಕೆಗೆ ಸಹಿ ಮಾಡಲು ಝೆಲೆನ್ಸ್ಕಿಯ ಅಗತ್ಯವೇ ಇಲ್ಲ ಎಂದೂ ಮೆಡ್ವೆಡೆವ್ ಅಭಿಪ್ರಾಯ ಪಟ್ಟಿದ್ದಾರೆ.
"ಹಿಟ್ಲರ್ ಕೂಡಾ ಶರಣಾಗತಿ ಒಡಂಬಡಿಕೆಗೆ ಸಹಿ ಮಾಡಿರಲಿಲ್ಲ. ಎಲ್ಲದಕ್ಕೂ ಒಂದು ಪರ್ಯಾಯ ಯಾವಾಗಲೂ ಇದ್ದೇ ಇರುತ್ತದೆ" ಎಂದೂ ಮೆಡ್ವೆಡೆವ್ ಬರೆದುಕೊಂಡಿದ್ದಾರೆ ಎಂದು TASS ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮುನ್ನ ಡ್ರೋಣ್ ದಾಳಿಯನ್ನು ಭಯೋತ್ಪಾದಕ ದಾಳಿ ಎಂದು ವ್ಯಾಖ್ಯಾನಿಸಿರುವ ರಷ್ಯಾ, ಉಕ್ರೇನ್, ರಷ್ಯಾ ಅಧ್ಯಕ್ಷ ಪುಟಿನ್ ಅವರ ಹತ್ಯೆಗೆ ಯತ್ನಿಸುತ್ತಿದ್ದು, ಅವರ ನಿವಾಸದ ಮೇಲೆ ಹಾರಾಡುತ್ತಿದ್ದ ಡ್ರೋಣ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿಕೊಂಡಿತ್ತು.







