"ನಮ್ಮನ್ನು ಕೊಂದು ಬಿಡಿ" ಎಂದು ಮೊರೆಯಿಟ್ಟ ವಿನೇಶ್ ಫೋಗಟ್: ಬಿಜೆಪಿ ಗೂಂಡಾಗಿರಿ ನಡೆಸುತ್ತಿದೆ ಎಂದ ಕೇಜ್ರಿವಾಲ್

ಹೊಸ ದಿಲ್ಲಿ: ದಿಲ್ಲಿ ಪೊಲೀಸರು ನಮ್ಮನ್ನು ನಿಂದಿಸಿದ್ದಾರೆ ಮತ್ತು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕುಸ್ತಿ ಪಟುಗಳು ಆರೋಪಿಸಿರುವ ಬೆನ್ನಿಗೇ, ಆಡಳಿತಾರೂಢ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದುರಹಂಕಾರಿ ಬಿಜೆಪಿಯು ಇಡೀ ವ್ಯವಸ್ಥೆಯನ್ನು ಗೂಂಡಾಗಿರಿಯಿಂದ ನಡೆಸಲು ಬಯಸುತ್ತಿದೆ ಎಂದು ಹೇಳಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದರೆ ಸಾಲದು, ಅವರನ್ನು ಅಧಿಕಾರದಿಂದಲೇ ಹೊರದೂಡಬೇಕು ಎಂದು ಆಪ್ ಮುಖ್ಯಸ್ಥರೂ ಆದ ಅರವಿಂದ್ ಕೇಜ್ರಿವಾಲ್ ಜನತೆಗೆ ಕರೆ ನೀಡಿದ್ದಾರೆ ಎಂದು hindustantimes.com ವರದಿ ಮಾಡಿದೆ.
ಬುಧವಾರ ಸಂಜೆ ಪ್ರತಿಭಟನಾನಿರತ ಕುಸ್ತಿ ಪಟುಗಳ ವಿರುದ್ಧ ದಿಲ್ಲಿ ಪೊಲೀಸರು ತೋರಿರುವ ಅಮಾನವೀಯ ವರ್ತನೆಯಿಂದ ಆಘಾತ ಹಾಗೂ ನಿಸ್ತೇಜಗೊಂಡಿರುವ, ಹತಾಶೆಯಿಂದ ಭಾವುಕರಾಗಿದ್ದ ಕುಸ್ತಿ ಪಟು ವಿನೇಶ್ ಫೋಗಟ್, ನಾವು ಅಪರಾಧಿಗಳಲ್ಲ ಮತ್ತು ಇಂತಹ ಅಗೌರವ ಪಡೆಯಲು ಯೋಗ್ಯರಲ್ಲ ಎಂದು ಕಿಡಿ ಕಾರಿದ್ದಾರೆ.
ತಡ ರಾತ್ರಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ವಿನೇಶ್ ಫೋಗಟ್, "ನಿಮಗೆ ನಮ್ಮನ್ನು ಕೊಲ್ಲಬೇಕಿದ್ದರೆ ಕೊಲ್ಲಿ" ಎಂದು ಅಳುತ್ತಾ ಹತಾಶೆ ವ್ಯಕ್ತಪಡಿಸಿದ್ದಾರೆ.
ವಿನೇಶ್ ಫೋಗಟ್ ಅವರ ಮಾಧ್ಯಮ ಸಂವಾದದ ವೀಡಿಯೊಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, "ದೇಶದ ಚಾಂಪಿಯನ್ ಕ್ರೀಡಾಪಟುಗಳೊಂದಿಗೆ ಇಂತಹ ಅನುಚಿತ ವರ್ತನೆಯೆ? ಇದು ತುಂಬಾ ನೋವಿನ ಹಾಗೂ ಅಪಮಾನಕಾರಿ ಸಂಗತಿ... ಈ ಜನರಿಗೆ (ಬಿಜೆಪಿ) ಇಡೀ ವ್ಯವಸ್ಥೆಯನ್ನು ಗೂಂಡಾಗಿರಿಯಿಂದ ನಡೆಸುವುದು ಬೇಕಿದೆ. ಅವರು ಇಡೀ ವ್ಯವಸ್ಥೆಯ ಅಪಹಾಸ್ಯ ಮಾಡುತ್ತಿದ್ದಾರೆ" ಎಂದು ಕಿಡಿ ಕಾರಿದ್ದಾರೆ.
"ನಾನು ದೇಶದ ಎಲ್ಲ ಜನರಲ್ಲೂ ಮನವಿ ಮಾಡುತ್ತೇನೆ.. ಬಿಜೆಪಿಯ ಗೂಂಡಾಗಿರಿಯನ್ನು ಇನ್ನೆಂದೂ ಸಹಿಸಬೇಡಿ.. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಅವರನ್ನು ಹೊರದೂಡುವ ಸಮಯ ಬಂದಿದೆ" ಎಂದೂ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.







