ದಿಲ್ಲಿ ಪೊಲೀಸರ ನಡುವೆ ಹೊಡೆದಾಟ: ಇಬ್ಬರು ಪ್ರತಿಭಟನಾನಿರತರಿಗೆ ತಲೆಗೆ ಗಾಯ; ಕುಸ್ತಿಪಟುಗಳ ಆರೋಪ

ಹೊಸದಿಲ್ಲಿ,ಮೇ 4: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲುಎಫ್ಐ)ದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣ ಸಿಂಗ್ ಬಂಧನಕ್ಕೆ ಆಗ್ರಹಿಸಿ ಇಲ್ಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ನಡುವೆ ಬುಧವಾರ ತಡರಾತ್ರಿ ಹೊಯ್ಕೈ ಸಂಭವಿಸಿದ್ದು,ಇಬ್ಬರು ಪ್ರತಿಭಟನಾಕಾರರು ತಲೆಗೆ ಗಾಯಗೊಂಡಿದ್ದಾರೆ.
ಘಟನೆಯ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಅವುಗಳಲ್ಲೊಂದು ಓರ್ವ ಪೊಲೀಸ್ ಪಾನಮತ್ತನಾಗಿದ್ದ ಎಂದು ಕೆಲವು ಪ್ರತಿಭಟನಾಕಾರರು ಆರೋಪಿಸಿರುವುದನ್ನು ತೋರಿಸಿದೆ.
‘ಆಪ್ ಶಾಸಕ ಸೋಮನಾಥ ಭಾರ್ತಿ ಅವರು ಅನುಮತಿಯಿಲ್ಲದೆ ಮಡಚುವ ಹಾಸಿಗೆಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ನಾವು ಮಧ್ಯಪ್ರವೇಶಿದ ಬಳಿಕ ಅವರ ಬೆಂಬಲಿಗರು ಆಕ್ರಮಣಕಾರಿಯಾಗಿದ್ದರು ಮತ್ತು ಟ್ರಕ್ನಿಂದ ಹಾಸಿಗೆಗಳನ್ನು ಹೊರಕ್ಕೆ ತೆಗೆಯಲು ಪ್ರಯತ್ನಿಸಿದ್ದರು. ಸಣ್ಣ ವಾಗ್ಯುದ್ಧವೊಂದು ನಡೆದಿದ್ದು,ಭಾರ್ತಿ ಮತ್ತು ಇತರ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು ’ ಎಂದು ಡಿಸಿಪಿ ಪ್ರಣವ ತಾಯಲ್ ತಿಳಿಸಿದರು.
ನಿಂದಿಸಿದರು,ಲಾಠಿಗಳಿಂದ ಹೊಡೆದರು
ಪ್ರತಿಭಟನೆಯ ನೇತೃತ್ವ ವಹಿಸಿರುವವರಲ್ಲಿ ಓರ್ವರಾಗಿರುವ ಬಜರಂಗ ಪುನಿಯಾ,ಕೆಲವು ಕುಸ್ತಿಪಟುಗಳು ಮಳೆಯಲ್ಲಿಯೇ ಮರದ ಮಂಚಗಳ ಮೇಲೆ ಮಲಗಿದ್ದಾಗ ಕೆಲವು ಪೊಲೀಸರು ಲಾಠಿಗಳಿಂದ ಅವರ ಮೇಲೆ ದಾಳಿ ನಡೆಸಿದ್ದರು ಎಂದು ಸುದ್ದಿಗಾರರಿಗೆ ತಿಳಿಸಿದರು.
ತಾರಾ ಕುಸ್ತಿಪಟು ವಿನೇಶ ಫೋಗಟ್ ಅವರು ಅಳುತ್ತಿದ್ದುದು ಕಂಡು ಬಂದಿತ್ತು. ಸ್ಥಳದಲ್ಲಿ ಮಹಿಳಾ ಪೊಲೀಸರು ಉಪಸ್ಥಿತರಿರಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ ಅವರು,‘ಅವರು ನಮ್ಮನ್ನೇಕೆ ನಿಂದಿಸಿದ್ದರು,ನಮ್ಮನ್ನೇಕೆ ತಳ್ಳಿದ್ದರು ’ ಎಂದು ಪ್ರಶ್ನಿಸಿದರು.
ವೈರಲ್ ಆಗಿರುವ ಇನ್ನೊಂದು ವೀಡಿಯೊದಲ್ಲಿ ವಿನೇಶ,ಓರ್ವ ಕುಸ್ತಿಪಟುವಿನ ತಲೆಗೆ ಗಾಯವಾಗಿದೆ. ಪೊಲೀಸರು ಅನುಚಿತವಾಗಿ ವರ್ತಿಸಿದ್ದರು ಮತ್ತು ಮಹಿಳಾ ಪ್ರತಿಭಟನಾಕಾರರರನ್ನು ತಳ್ಳಿದ್ದರು ಎಂದು ಆರೋಪಿಸಿದ್ದಾರೆ.
ಪ್ರತಿಭಟನಾಕಾರರನ್ನು ಬೆಂಬಲಿಸಲು ದಿಲ್ಲಿಗೆ ತಲುಪುವಂತೆ ನಾಗರಿಕರನ್ನು ಆಗ್ರಹಿಸಿದ ಪುನಿಯಾ,ನಿಮ್ಮ ಟ್ರಾಕ್ಟರ್ಗಳೊಂದಿಗೆ ಬೆಳಕು ಹರಿಯುವ ಮುನ್ನ ದಿಲ್ಲಿಗೆ ಬನ್ನಿ. ಅವರು ಸೋದರಿಯರು ಮತ್ತು ಪುತ್ರಿಯರನ್ನು ನಿಂದಿಸುತ್ತಿದ್ದಾರೆ ಎಂದರು.
ಪ್ರತಿಭಟನೆಯ ಸಂಘಟಕರಲ್ಲಿ ಓರ್ವರಾಗಿರುವ ಗೋಪಾಲ ತಿವಾರಿ,‘ಹೊಯ್ಕೈಗೆ ಮುನ್ನ ಟಾಯ್ಲೆಟ್ನಲ್ಲಿ ಮದ್ಯ ಸೇವಿಸುತ್ತಿದ್ದ ಓರ್ವ ಪೊಲೀಸ್ ಸಿಕ್ಕಿಬಿದ್ದಿದ್ದ ಮತ್ತು ಜನರು ಆತನನ್ನು ವೈದ್ಯಕೀಯ ಪರೀಕ್ಷಗೆ ಒಳಪಡಿಸುವಂತೆ ಆಗ್ರಹಿಸಿದ್ದರು. ಆದರೆ ಪೊಲೀಸರು ನಮ್ಮನ್ನು ಬೆದರಿಸಿ ಆತನನ್ನು ಕರೆದೊಯ್ದಿದ್ದರು ’ಎಂದು ಹೇಳಿದರು.
‘ಮಳೆ ಬರುತ್ತಿತ್ತು ಮತ್ತು ಸ್ಥಳದಲ್ಲಿ ನೀರು ತುಂಬಿಕೊಂಡಿತ್ತು,ಹೀಗಾಗಿ ನಾವು ಮಂಚಗಳನ್ನು ತಂದಿದ್ದೆವು. ಆದರೆ ಪೊಲೀಸರು ಅವುಗಳನ್ನು ಸುತ್ತಲೂ ಎಸೆಯಲು ಆರಂಭಿಸಿದ್ದರು. ಪುನಿಯಾ ಮತ್ತು ವಿನೇಶ ಸ್ಥಳಕ್ಕೆ ತಲುಪಿದಾಗ ಮೂರು ನಕ್ಷತ್ರಗಳನ್ನು ಧರಿಸಿದ್ದ ಪೊಲೀಸ್ ಅಧಿಕಾರಿಯೋರ್ವರು ಅವರನ್ನು,ವಿಶೇಷವಾಗಿ ವಿನೇಶರನ್ನು ನಿಂದಿಸಲು ಆರಂಭಿಸಿದ್ದರು. ಕೋಲಾಹಲ ಸೃಷ್ಟಿಯಾದಾಗ ಕೆಲವು ಪೊಲೀಸರು ಮಡಚುವ ಮಂಚದಿಂದ ರಾಹುಲ್ ಯಾದವ್ (ಕುಸ್ತಿಪಟು)ಗೆ ಹೊಡೆದಿದ್ದರು,ಅವರನ್ನು ಒದ್ದಿದ್ದರು ಮತ್ತು ಲಾಠಿಗಳಿಂದ ಥಳಿಸಿದ್ದರು. ಅವರ ತಲೆ ಮತ್ತು ಕಾಲಿಗೆ ಗಾಯಗಳಾಗಿವೆ ’ಎಂದರು.
ಪೊಲೀಸರು ಯಾದವ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲೂ ಪ್ರತಿಭಟನಾಕಾರರಿಗೆ ಅವಕಾಶವನ್ನು ನೀಡಿರಲಿಲ್ಲ. ಕೆಲವು ಪೊಲೀಸರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ತಿವಾರಿ ಆರೋಪಿಸಿದರು.
‘ಜಂತರ್ ಮಂತರ್ನಲ್ಲಿ ಪೊಲೀಸರಿಂದ ಕುಸ್ತಿಪಟುಗಳ ಮೇಲಿನ ದಾಳಿಯಲ್ಲಿ ನನ್ನ ಕಿರಿಯ ಸೋದರ ದುಷ್ಯಂತ ಫೋಗಟ್ ತಲೆಗೆ ಗಾಯವಾಗಿದೆ. ಇನ್ನೋರ್ವ ಕುಸ್ತಿಪಟು ಕೂಡ ಗಾಯಗೊಂಡಿದ್ದಾರೆ. ಇದು ಅತ್ಯಂತ ನಾಚಿಕೆಗೇಡು ’ ಎಂದು ವಿನೇಶರ ಸೋದರ ಸಂಬಂಧಿ ಹಾಗೂ ಒಲಿಂಪಿಯನ್ ಗೀತಾ ಫೋಗಟ್ ಟ್ವೀಟಿಸಿದ್ದಾರೆ.
ಕೇಂದ್ರ ಸರಕಾರದ ವಿರುದ್ಧ ದಾಳಿ ನಡೆಸಿದ ದಿಲ್ಲಿ ಸಚಿವ ಸೌರಭ ಭಾರದ್ವಾಜ್ ಅವರು ಆರೋಪಿ ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ತಪಾಸಣೆಗೆ ಆಗ್ರಹಿಸಿದರು.
‘ಕೇಂದ್ರ ಸರಕಾರವು ತನ್ನ ಪೊಲೀಸ್ ಅಧಿಕಾರಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದನ್ನು ತಪ್ಪಿಸುತ್ತದೆ. ಪೊಲೀಸ್ ಸಿಬ್ಬಂದಿ ಪಾನಮತ್ತನಾಗಿದ್ದ ಮತ್ತು ತಮ್ಮಿಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂದು ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದಾರೆ. ಎಂತಹ ನಾಚಕಗೇಡು ! ’ಎಂದು ಅವರು ಟ್ವೀಟಿಸಿದ್ದಾರೆ. ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಡರಾತ್ರಿಯೇ ಪ್ರತಿಭಟನಾ ಸ್ಥಳವನ್ನು ತಲುಪಿದ್ದರು. ಅದರ ಬೆನ್ನಲ್ಲೇ,ಮಲಿವಾಲ್ರನ್ನು ಬಂಧಿಸಲಾಗಿದೆ ಎಂದು ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ ತಿಳಿಸಿತ್ತು.







