ಸೈಬೀರಿಯದ ಗುಹೆಯಿಂದ 20,000 ವರ್ಷ ಹಿಂದಿನ ಪದಕ ಪತ್ತೆಹಚ್ಚಿದ ಸಂಶೋಧಕರು

ವಾಶಿಂಗ್ಟನ್, ಮೇ 4: ಎಲ್ಕ್ (ಜಿಂಕೆಯ ಒಂದು ಪ್ರಭೇದ)ನ ಕೋರೆ ಹಲ್ಲನ್ನು ಕೊರೆದು ಮಾಡಲಾದ ಪದಕವೊಂದನ್ನು ರಶ್ಯದ ಸೈಬೀರಿಯದ ಗುಹೆಯೊಂದರಿಂದ ಸಂಶೋಧಕರು ಪತ್ತೆಹಚ್ಚಿದ್ದಾರೆ. ಈ ಪ್ರಾಚೀನ ವಸ್ತು ಸುಮಾರು 20,000 ವರ್ಷಗಳ ಹಿಂದಿನದು ಎಂಬುದಾಗಿ ಅಂದಾಜಿಸಲಾಗಿದೆ.
ಸೈಬೀರಿಯದ ಈ ಡೆನಿಸೊವ ಗುಹೆ ಪ್ರಾಚೀನ ವಸ್ತುಗಳ ಭಂಡಾರವಾಗಿದೆ. ಪ್ರಾಚೀನ ಡಿಎನ್ಎಯನ್ನು ಹೊರದೆಗೆಯುವ ನೂತನ ವಿಧಾನವೊಂದರ ಮೂಲಕ ಈ ಪ್ರಾಚೀನ ಪದಕವು ಯಾರಿಗೆ ಸೇರಿತ್ತು ಎಂಬುದನ್ನು ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ಬುಧವಾರ ತಿಳಿಸಿದರು. ಈ ಪದಕವು ಶಿಲಾಯುಗದ ಮಹಿಳೆಯೊಬ್ಬರಿಗೆ ಸೇರಿತ್ತು ಎಂದು ಅವರು ಹೇಳಿದ್ದಾರೆ.
ರಶ್ಯದ ಅಲ್ಟಾಯಿ ಪರ್ವತದ ತಪ್ಪಲಲ್ಲಿರುವ ಈ ಗುಹೆಯ ಪೂರ್ವದಲ್ಲಿರುವ ಸೈಬೀರಿಯದ ಭಾಗವೊಂದರಲ್ಲಿ ವಾಸಿಸಿದ್ದ ಬೇಟೆಗಾರರ ಸಮುದಾಯವೊಂದಕ್ಕೆ ಈ ಮಹಿಳೆ ಸೇರಿದ್ದರು ಎಂಬುದಾಗಿ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ಆ ಮಹಿಳೆಯು ಪದಕವನ್ನು ಮಾಡಿದ್ದರೇ ಅಥವಾ ಕೇವಲ ಧರಿಸಿದ್ದರೇ ಎನ್ನುವುದು ಗೊತ್ತಾಗಿಲ್ಲ. ದಾರವನ್ನು ಹಾಕಲು ಸಾಧ್ಯವಾಗುವಂತೆ ಎಲ್ಕ್ನ ಕೋರೆಹಲ್ಲಿಗೆ ತೂತೊಂದನ್ನು ಕೊರೆಯಲಾಗಿತ್ತು. ಆದರೆ, ಆ ದಾರ ಈಗ ಲಭ್ಯವಿಲ್ಲ.
ನಮ್ಮ ಹೋಮೊ ಸೆಪಿಯನ್ಸ್ ಮಾನವ ಪ್ರಭೇದವು ಆಫ್ರಿಕದಲ್ಲಿ 3 ಲಕ್ಷ ವರ್ಷಗಳಿಗೂ ಹಿಂದೆ ಉದ್ಭವಿಸಿತು ಹಾಗೂ ಬಳಿಕ ಜಗತ್ತಿನೆಲ್ಲೆಡೆ ಹರಡಿತು. ಸುಮಾರು ಒಂದು ಲಕ್ಷ ವರ್ಷಗಳ ಹಿಂದೆಯೇ ಆದಿ ಮಾನವರು ಆಭರಣಗಳನ್ನು ಧರಿಸುವುದು ಪತ್ತೆಯಾಗಿದೆ.
ಈ ಡೆನಿಸೋವ ಗುಹೆಯಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಇಂದು ಅಳಿದುಹೋಗಿರುವ ಮಾನವ ಪ್ರಭೇದಗಳಾದ ಡೆನಿಸೋವನ್ಸ್, ನಿಯಾಂಡರ್ತಾಲ್ ಮತ್ತು ನಮ್ಮದೇ ಹೋಮೊ ಸೆಪಿಯನ್ಸ್ ಗಳು ವಾಸಿಸಿದ್ದರು.