ಭೇಟಿ ಬಚಾವೊ ಕಣ್ಣೊರೆಸುವ ತಂತ್ರ: ರಾಹುಲ್ ಗಾಂಧಿ

ಹೊಸದಿಲ್ಲಿ, ಮೇ 4: ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಹಾಗೂ ದಿಲ್ಲಿ ಪೊಲೀಸರ ನಡುವೆ ನಡೆದ ಜಗಳದ ಕುರಿತಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘‘ಭಾರತದ ಪುತ್ರಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆೆ’’ ಎಂದು ಆರೋಪಿಸಿದ್ದಾರೆ.
‘‘ದೇಶದ ಆಟಗಾರರೊಂದಿಗಿನ ಇಂತಹ ನಡವಳಿಕೆ ನಾಚಿಕೆಗೇಡು. ಭೇಟಿ ಬಚಾವೊ ಕೇವಲ ಕಣ್ಣೊರೆಸುವ ತಂತ್ರ. ಭಾರತದ ಪುತ್ರಿಯರ ಮೇಲೆ ದೌರ್ಜನ್ಯ ನಡೆಸಲು ಬಿಜೆಪಿ ಯಾವತ್ತೂ ನಾಚಿಕೆಪಡಲಿಲ್ಲ’’ ಎಂದು ಅವರು ಹೇಳಿದ್ದಾರೆ.
‘‘ತಮ್ಮ ಕಠಿಣ ಪರಿಶ್ರಮದಿಂದ ಹಾಗೂ ಬದ್ಧತೆಯಿಂದ ದೇಶ ಹಾಗೂ ತಮ್ಮ ಕುಟುಂಬಕ್ಕೆ ಪ್ರಶಸ್ತಿಗಳನ್ನು ತರುವ ಮಹಿಳಾ ಕ್ರೀಡಾಪಟುಗಳ ಕಣ್ಣಲ್ಲಿ ನೀರು ನೋಡುವಾಗ ತುಂಬಾ ಬೇಸರವಾಗುತ್ತದೆ. ಅವರ ಅಹವಾಲನ್ನು ಆಲಿಸಬೇಕು ಹಾಗೂ ಅವರಿಗೆ ನ್ಯಾಯ ನೀಡಬೇಕು’’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಈ ಕುರಿತಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘‘ದೇಶದ ಚಾಂಪಿಯನ್ ಆಟಗಾರರೊಂದಿಗೆ ಇಂತಹ ದುರ್ನಡತೆಯೇ? ಇದು ತುಂಬಾ ಬೇಸರದ ಹಾಗೂ ನಾಚಿಕೆಗೇಡಿನ ವಿಚಾರ. ಬಿಜೆಪಿಯ ತಲೆಯಲ್ಲಿ ದುರಹಂಕಾರ ತುಂಬಿ ತುಳುಕುತ್ತಿದೆ. ಈ ಜನರು ಸಂಪೂರ್ಣ ವ್ಯವಸ್ಥೆಯನ್ನು ಗೂಂಡಾಗಿರಿಯಿಂದ ನಡೆಸಲು ಬಯಸುತ್ತಿದ್ದಾರೆ. ಅವರು ಸಂಪೂರ್ಣ ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.







