'ಅಲ್ಪಸಂಖ್ಯಾತರ ಮತ ಬೇಡ ಎಂದ ಬಿಜೆಪಿಗೆ ತಕ್ಕಪಾಠ ಕಲಿಸಿ': ದಾವಣಗೆರೆಯಲ್ಲಿ ಕನ್ಹಯ್ಯ ಕುಮಾರ್ ರೋಡ್ ಶೋ
ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪರ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ ಕನ್ನಯ್ಯಕುಮಾರ್ ಅವರು ಬೃಹತ್ ರೋಡ್ ಶೋ ನಡೆಸಿದರು.
ಅರಳಿಮರ ಸರ್ಕಲ್‍ನಿಂದ ಪ್ರಾರಂಭವಾದ ಬೃಹತ್ ರೋಡ್ ಶೋ ಹಳೇ ಬೇತೂರು ರಸ್ತೆ, ಮದೀನಾ ಸರ್ಕಲ್, ಆಜಾದ್ ನಗರ ಮುಖ್ಯರಸ್ತೆ, ಬಾಷಾನಗರ ಮೂಲಕ ಅಖ್ತರ್ ರಜಾ ಸರ್ಕಲ್‍ವರೆಗೆ ನಡೆಯಿತು.
ರೋಡ್ ಶೋನಲ್ಲಿ ಮಾತನಾಡಿದ ಕನ್ಹಯ್ಯ ಕುಮಾರ್, ಬಿಜೆಪಿಗರು ಅಲ್ಪಸಂಖ್ಯಾತರ ಮತವನ್ನು ಬೇಡ ಎಂದು ಅಧಿಕಾರದಲ್ಲಿ ಹೇಳಿಕೆ ನೀಡಿ ಇದೀಗ ನಿಮ್ಮ ಬಳಿ ಬರುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ಈ ದೇಶದಲ್ಲಿ ಬಿಜೆಪಿಯ ಕೋಮುವಾದವನ್ನು ಎದುರಿಸುವ ಶಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಅಲ್ಪಸಂಖ್ಯಾತರು ಬೇರೆ ಪಕ್ಷಕ್ಕೆ ಮತ ನೀಡಿದರೆ ಬಿಜೆಪಿಗೆ ನೀಡಿ ಕೋಮುವಾದವನ್ನು ಬೆಂಬಲಿಸಿದಂತೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದವರು ನಮ್ಮ ಸದಾ ಬೆಂಬಲಿಸುತ್ತಾ ಬಂದಿದ್ದು, ಮುಂದೆಯೂ ಬೆಂಬಲಿಸಲಿದ್ದಾರೆ. ಕೆಲವರು ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಅಂತಹವರನ್ನು ದೂರವಿಡಿ ಎಂದು ಕರೆ ನೀಡಿದರು.
ಉತ್ತರ ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಮಾತನಾಡಿ, ಕನ್ನಯ್ಯ ಕುಮಾರ್ ಅವರು ನಮ್ಮ ಪರವಾಗಿ ಆಗಮಿಸಿ ರೋಡ್ ನಡೆಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿ ಕೋಮುವಾದದ ವಿರುದ್ಧ ಜಾತ್ಯಾತೀತ ಪರವಾಗಿ ಯುವಕರು ಸಿಡಿದೇಳಬೇಕೆಂದರು.
ತಂಝಿಮ್ ಕಮಿಟಿ ಅಧ್ಯಕ್ಷ ದಾದು ಶೇಠ್ ಮತ್ತು ನಿಕಟಪೂರ್ವ ಅಧ್ಯಕ್ಷ ಸಾಧಿಕ್ ಪೈಲ್ವಾನ್ ಮಾತನಾಡಿ, ಡಾ. ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್‍ಎಸ್ ಮಲ್ಲಿಕಾರ್ಜುನ್ ಅವರು ಅಲ್ಪಸಂಖ್ಯಾತ ಸಮುದಾಯವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು, ಅಂತಹವರನ್ನು ನಾವು ಸದಾ ಬೆಂಬಲಿಸುತ್ತೇವೆ ಎಂದರು.
ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಸೈಯದ್ ಸೈಫುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಕೆ.ಚಮನ್‍ಸಾಬ್, ಸೈಯದ್‍ಚಾರ್ಲಿ, ಜಾಕೀರ್ ಅಲಿ. ಶಫೀಕ್ ಪಂಡಿತ್, ಎ.ಬಿ.ರಹೀಂ, ಪರಸಪ್ಪ, ಫಾರೂಕ್, ಅಲ್ತಾಫ್ ಹುಸೇನ್, ಆರೀಫ್, ಮುಖಂಡರಾದ ಎ.ಬಿ.ಹಬೀಬ್ ಸಾಬ್, ಫೈರೋಜ್ ಪಾಟೀಲ್, ಬುತ್ತಿಗೌಸ್, ಕೊಡಪಾನದಾದಾಪೀರ್, ರಹಮತ್ ಅಲಿ, ಇರ್ಫಾನ್, ಆಶಿಕ್ ಜೈನ್, ಪಾಲಿಕೆಯ ಕಾಂಗ್ರೆಸ್ ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಯುವ ಕಾಂಗ್ರೆಸ್, ಎನ್‍ಎಸ್‍ಯುಐ, ಮಹಿಳಾ ಕಾಂಗ್ರೆಸ್, ಅಲ್ಪಸಂಖ್ಯಾತರ ವಿಭಾಗ, ಪ.ಜಾತಿ ಮತ್ತು ಪ.ಪಂಗಡ, ಓಬಿಸಿ, ಕಾರ್ಮಿಕ ವಿಭಾಗ, ಅಸಂಘಟಿಕ ಕಾರ್ಮಿಕ ವಿಭಾಗಗಳು ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಮತ್ತಿತರರಿದ್ದರು.







