ಕುಸ್ತಿಪಟುಗಳನ್ನು ಭೇಟಿಯಾದ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ

ಹೊಸದಿಲ್ಲಿ, ಮೇ 4: ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಗುರುವಾರ ಭೇಟಿಯಾಗಿದ್ದಾರೆ.
ಆರಂಭದಲ್ಲಿ ತನಗೆ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭೇಟಿಯಾಗಲು ಅವಕಾಶ ನಿರಾಕರಿಸಲಾಯಿತು ಎಂದು ಮಲಿವಾಲ್ ಆರೋಪಿಸಿದ್ದಾರೆ.
ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡ ವೀಡಿಯೊದಲ್ಲಿ ಅವರು, ‘‘ತಾನು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದೇನೆ. ಪ್ರತಿಭಟನಕಾರರನ್ನು ಭೇಟಿಯಾಗಲು ಬಯಸಿದ್ದೇನೆ’’ ಎಂದು ಪೊಲೀಸರಿಗೆ ಹೇಳುತ್ತಿರುವ ಕಂಡು ಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಹೊಸದಿಲ್ಲಿಯ ಡಿಸಿಪಿ, ‘‘ದಿಲ್ಲಿ ಮಹಿಳಾ ಆಯೋಗದ ಗೌರವಾನ್ವಿದ ಮುಖ್ಯಸ್ಥರನ್ನು ಅಧಿಕಾರಿಯೊಬ್ಬರು ಬ್ಯಾರಿಕೇಡ್‌ನಲ್ಲಿ ತಡೆದಿದ್ದರು. ಅನಂತರ ಕೂಡಲೇ ತೆರಳಲು ಅವಕಾಶ ಮಾಡಿ ಕೊಡಲಾಯಿತು. ಜಂತರ್‌ಮಂತರ್‌ನ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಒಬ್ಬರು ಹೋಗುವುದಕ್ಕೆ ಯಾವುದೇ ನಿರ್ಬಂಧ ಇಲ್ಲ’’ ಎಂದಿದ್ದಾರೆ.
ಅನಂತರ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಮಲಿವಾಲ್, ‘‘ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳೊಂದಿಗೆ ನಾನು ಧರಣಿ ಕುಳಿತಿದ್ದೇನೆ. ಕಳೆದ ರಾತ್ರಿ ಪಾನಮತ್ತ ಕೆಲವು ಪೊಲೀಸ್ ಸಿಬ್ಬಂದಿ ತಮ್ಮೊಂದಿಗೆ ದುರ್ನಡತೆ ತೋರಿದರು ಹಾಗೂ ದಾಳಿ ನಡೆಸಿದರು ಎಂದು ಅವರು ನನ್ನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಬಳಿಕ ದಿಲ್ಲಿ ಮಹಿಳಾ ಆಯೋಗ ಅವರ ವಿರುದ್ಧ ಕಾರ್ಯ ಪ್ರವೃತ್ತವಾಗಲಿದೆ’’ ಎಂದಿದ್ದಾರೆ.







