ದೇವರು, ಧರ್ಮದ ಹೆಸರಿನಲ್ಲಿ ಮತ ಯಾಚನೆ: ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ರೋಡ್ ಶೋಗೆ ಅನುಮತಿ ನೀಡದಂತೆ ಮನವಿ
ಬೆಂಗಳೂರು, ಮೇ.5: ಬೆಂಗಳೂರು ನಗರದಲ್ಲಿ ಮೇ 6 ಹಾಗೂ 7 ರಂದು ಪ್ರಧಾನಿ ನರೇಂದ್ರ ಮೋದಿ ಹಮ್ಮಿಕೊಂಡಿರುವ ರೋಡ್ ಶೋಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಅನುಮತಿ ನೀಡದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಕಾಂಗ್ರೆಸ್ ಕಾನೂನು ಘಟಕ ರೋಡ್ ಶೋ ವಿರೋಧಿಸಿ ಗುರುವಾರ ದೂರು ಸಲ್ಲಿಸಿದ್ದು, ಮೋದಿ ಅವರ ರೋಡ್ ಶೋ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಭಾಷಣಗಳಲ್ಲಿ ಧಾರ್ಮಿಕ ಭಾವನೆಗಳನ್ನು ಬಳಸಿಕೊಂಡಿದ್ದಾರೆ. ಕೇವಲ ಚುನಾವಣೆ ಲಾಭಕ್ಕೋಸ್ಕರ ದೇವ ದೇವತೆಗಳನ್ನು ಬಳಸುತ್ತಿದ್ದಾರೆ. ಈ ರೀತಿಯ ಪ್ರಚಾರಕ್ಕೆ ಅವಕಾಶ ನೀಡಬಾರದು. ಜಾತಿ ಧರ್ಮದ ಹೆಸರು ಬಳಸಿಕೊಂಡು ಚುನಾವಣೆ ಪ್ರಚಾರಕ್ಕೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ 38 ಕಿಮೀ ರೋಡ್ ಶೋ ಗೆ ಅವಕಾಶ ನೀಡಬಾರದು. ಇಂತಹ ಕಾರ್ಯಕ್ರಮಗಳಿಂದ ಜನರಿಗೆ ತೊಂದರೆ ಆಗುತ್ತದೆ ಎಂಬ ನಿಟ್ಟಿನಲ್ಲಿ ಹೈಕೋರ್ಟ್ ರಿಟ್ ಪಿಟಿಷನ್ ನಲ್ಲಿ ನಿರ್ದೇಶನ ನೀಡಲಾಗಿದೆ. ಹೈಕೋರ್ಟ್ ನಿರ್ದೇಶನ ಪಾಲನೆ ಮಾಡದೆಯೇ ರೋಡ್ ಶೋ ಅವಕಾಶ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಬೆಂಗಳೂರು ನಗರದಲ್ಲಿ ಆ್ಯಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳ ಓಡಾಟಕ್ಕೆ ಅನನುಕೂಲ ಆಗುವ ನಿಟ್ಟಿನಲ್ಲಿ ರೋಡ್ ಶೋ ಅವಕಾಶ ನೀಡಬಾರದು. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಸರಕಾರದ ಹಣವನ್ನೂ ಖರ್ಚು ಮಾಡಲಾಗುತ್ತಿದೆ. ಇದನ್ನು ಲೆಕ್ಕಹಾಕಲು ಸರಿಯಾದ ಸಿಬ್ಬಂದಿ ನೇಮಕ ಮಾಡಬೇಕು ಎಂದೂ ದೂರಿನಲ್ಲಿ ಕಾಂಗ್ರೆಸ್ ಕಾನೂನು ಘಟಕದ ಆರೋಪಿಸಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾನೂನು ವಿಭಾಗದ ಉಸ್ತುವಾರಿ ಎಸ್.ಎ ಅಹಮ್ಮದ್, ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.