'ಮನ್ ಕಿ ಬಾತ್' 100ನೇ ಸಂಚಿಕೆ ಆಲಿಸಲು ಸಮಯಕ್ಕೆ ಸರಿಯಾಗಿ ಬಾರದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಶಾಲೆ: ವರದಿ
ಶಿಕ್ಷಣ ಇಲಾಖೆಯಿಂದ ಶೋಕಾಸ್ ನೋಟಿಸ್
ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿಯ ಬಾನುಲಿ ಕಾರ್ಯಕ್ರಮ ʼಮನ್ ಕಿ ಬಾತ್ʼ ಇದರ 100ನೇ ಸಂಚಿಕೆಯನ್ನು ಆಲಿಸಲು ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದ ವಿದ್ಯಾರ್ಥಿಗಳಿಂದ ಡೆಹ್ರಾಡೂನ್‌ನ ಶಾಲೆಯೊಂದು ತಲಾ ರೂ. 100 ದಂಡ ಸಂಗ್ರಹಿಸಿದೆ ಎಂದು ಆರೋಪಿಸಲಾಗಿದೆ. ದಂಡ ಕಟ್ಟವಂತೆ ಶಾಲೆಯ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಆಡಳಿತ ಮಂಡಳಿ ಸೂಚಿಸಿದೆ ಎಂದು IANS ವರದಿ ಮಾಡಿದೆ.
ಈ ಕುರಿತಂತೆ ಹೆತ್ತವರ ಮತ್ತು ವಿದ್ಯಾರ್ಥಿಗಳ ಹಕ್ಕುಗಳ ರಾಷ್ಟ್ರೀಯ ಸಂಘಟನೆಯ ಅಧ್ಯಕ್ಷ ಆರಿಫ್ ಖಾನ್ ಅವರು ಡೆಹ್ರಾಡೂನ್‌ನ ಮುಖ್ಯ ಶಿಕ್ಷಣಾಧಿಕಾರಿಗೆ ಪತ್ರ ಬರೆದು ಶಾಲೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಶಾಲೆಗೆ ನೋಟಿಸ್ ಜಾರಿಗೊಳಿಸಿ ಮೂರು ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ಡೆಹ್ರಾಡೂನ್‌ನ ಜಿಆರ್‌ಡಿ ನಿರಂಜನಪುರ್ ಅಕಾಡೆಮಿ ಆಡಳಿತವು ಮನ್ ಕಿ ಬಾತ್ ಕೇಳಲು ಸಮಯಕ್ಕೆ ಸರಿಯಾಗಿ ಶಾಲೆಗೆ ಆಗಮಿಸದ ವಿದ್ಯಾರ್ಥಿಗಳು ರೂ. 100 ಪಾವತಿಸಬೇಕು ಅಥವಾ ವೈದ್ಯಕೀಯ ಪ್ರಮಾಣಪತ್ರ ಹಾಜರುಪಡಿಸಬೇಕು ಎಂದು ಸೂಚಿಸಿದೆ ಎಂದು ಆರೋಪಿಸಲಾಗಿದೆ.
ಶಾಲೆಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು ಶಾಲೆಯಿಂದ ಮೂರು ದಿನಗಳೊಳಗೆ ಉತ್ತರ ಬಾರದೇ ಇದ್ದಲ್ಲಿ ಶಾಲೆ ವಿದ್ಯಾರ್ಥಿಗಳಿಂದ ದಂಡ ಸಂಗ್ರಹಿಸಿದೆ ಎಂದು ತಿಳಿಯಲಾಗುವುದು. ಇಲಾಖೆ ನಂತರ ಕ್ರಮಕೈಗೊಳ್ಳಲಿದೆ ಎಂದು ಡೆಹ್ರಾಡೂನ್ ಮುಖ್ಯ ಶಿಕ್ಷಣಾಧಿಕಾರಿ ಪ್ರದೀಪ್ ಕುಮಾರ್ ಹೇಳಿದ್ದಾರೆ.