ಕುಸ್ತಿಪಟುಗಳಿಗೆ ಬೆಂಬಲ: ಪದಕಗಳನ್ನು ವಾಪಸ್ ನೀಡುವ ಎಚ್ಚರಿಕೆ ನೀಡಿದ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಫೋಗಟ್
ಚಂಡೀಗಢ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕೆಂದು ಕೋರಿ ಹಲವು ಪ್ರಮುಖ ಕುಸ್ತಿಪಟುಗಳು ಜಂತರ್ ಮಂತರ್ನಲ್ಲಿ ಕಳೆದ ಹಲವಾರು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಫೋಗಟ್, ನ್ಯಾಯ ದೊರೆಯದೇ ಇದ್ದರೆ ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡುವುದಾಗಿ ಎಚ್ಚರಿಸಿದ್ದಾರೆ.
ಒಲಿಂಪಿಕ್ಸ್ ಪದಕ ವಿಜೇತ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ, ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಸಹಿತ ಭಾರತದ ಖ್ಯಾತನಾಮ ಕುಸ್ತಿ ಪಟುಗಳು ಎಪ್ರಿಲ್ 23ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
“ಬ್ರಿಜ್ ಭೂಷಣ್ ಎದುರಿಸುತ್ತಿರುವ ಆರೋಪಗಳನ್ನು ಪರಿಗಣಿಸಿದಾಗ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಅವರನ್ನು ಬಂಧಿಸಬೇಕು,” ಎಂದು ಮೂರು ವರ್ಷಗಳ ಹಿಂದೆ ಬಿಜೆಪಿ ಸೇರಿದ್ದ ಮಹಾವೀರ್ ಫೋಗಟ್ ಹೇಳಿದರು.
ಈ ಕುರಿತು ಸರಕಾರ ಅಥವಾ ಪಕ್ಷದ ಜೊತೆ ಚರ್ಚೆನಡೆದಿದೆಯೇ ಎಂದು ಕೇಳಿದಾಗ ಇಲ್ಲ ಎಂದು ಅವರು ಹೇಳಿದರು.
ಪ್ರತಿಭಟನಾನಿರತ ಕುಸ್ತಿಪಟುಗಳು ಕೂಡ ತಮ್ಮ ಪದಕ ಹಾಗೂ ಪ್ರಶಸ್ತಿಗಳನ್ನು ವಾಪಸ್ ನೀಡುವುದಾಗಿ ಎಚ್ಚರಿಸಿದ್ದಾರೆ.