ಕಾಂಗ್ರೆಸ್‌ನಿಂದ ಕೋಮುಗಲಭೆಗೆ ಪ್ರಚೋದನೆ: ಗೀತಾ ವಿವೇಕಾನಂದ ಆರೋಪ

ಉಡುಪಿ, ಮೇ 5: ರಾಜ್ಯದಲ್ಲಿ ಹಿಂದುಗಳನ್ನು ಕಡೆಗಣಿಸಿ ಓಲೈಕೆ ರಾಜಕಾರಣ ಮಾಡಿಕೊಂಡು ಬರುತ್ತಿರುವ ಕಾಂಗ್ರೆಸ್ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದೆ. ಪ್ರತೀ ಹಂತದಲ್ಲಿ ಕಾಂಗ್ರೆಸ್ ಪಕ್ಷವು ಹಿಂದುಗಳಿಗೆ ಅನ್ಯಾಯ ಮಾಡಿದೆ. ಹಿಂದೂ ವರ್ಗವನ್ನು ಕಡೆಗಣಿಸಿ ಕೋಮು ಗಲಭೆಗೆ ಪ್ರಚೋದಿಸಿ ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾ ನಂದ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಬಹುತೇಕ ಬೇಡಿಕೆ ಈಡೇರಿಸಿದೆ. ಮಹಿಳೆಯರಿಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ಮಹಿಳಾ ಸಬಲೀಕರಣದ ಆಶಯವನ್ನು ಎತ್ತಿ ಹಿಡಿದಿದೆ ಎಂದರು.
ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವುದು ಹೆಮ್ಮೆಯ ವಿಚಾರ ವಾಗಿದ್ದು, ಐದು ವಿಧಾನಸಭಾ ಕ್ಷೇತ್ರ ಗಳಲ್ಲಿಯೂ ಬಿಜೆಪಿ ಪಿಎಂ ಮಾತೃ ವಂದನಾ, ಸುರಕ್ಷಿತ್ ಮಾತೃತ್ವ ಅಭಿಯಾನ, ಗೃಹಿಣಿ ಶಕ್ತಿ ಯೋಜನೆ, ಅಮೃತ್ ಸೆಲ್ಫ್ ಹೆಲ್ಪ್ ಯೋಜನೆ, ಪೋಷಣ್ ಅಭಿಯಾನವನ್ನು ಜಾರಿಗೆ ತಂದಿದೆ. ಸುರಕ್ಷಿತ್ ಮಾತೃತ್ವ ಯೋಜನೆ ಅಡಿಯಲ್ಲಿ 15 ಲಕ್ಷ ಗರ್ಭಿಣಿಯರಿಗೆ, ಮಾತೃ ಪೂರ್ಣ ಯೋಜನೆಯಡಿ 9.35 ಲಕ್ಷ ತಾಯಂದಿರು ಪ್ರಯೋಜನ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾ ನಾಯಕಿ ಅಶ್ವಿನಿ ಎಂ.ಎಲ್. ಮಂಜೇಶ್ವರ, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಪ್ರಮುಖರಾದ ಶ್ಯಾಮಲಾ ಕುಂದರ್, ರಜನಿ ಹೆಬ್ಬಾರ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಶಿಲ್ಪಾ ಸುವರ್ಣ ಉಪಸ್ಥಿತರಿದ್ದರು.