ರಾಜಧರ್ಮ ಪಾಲಿಸದ ಬಿಜೆಪಿ ಸರಕಾರ: ಅಶ್ವನಿ ಕುಮಾರ್ ರೈ ಆರೋಪ

ಮಂಗಳೂರು: ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರವು ತನ್ನ ಅಧಿಕಾರವಧಿಯಲ್ಲಿ ಎಂದೂ ಕೂಡ ರಾಜಧರ್ಮ ಪಾಲಿಸಲಿಲ್ಲ. ಬದಲಾಗಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಜನರ ನೆಮ್ಮದಿಗೆ ಭಂಗ ತಂದಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ನ್ಯಾಯವಾದಿ ಅಶ್ವನಿ ಕುಮಾರ್ ರೈ ಆರೋಪಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರಕಾರವು ಗುತ್ತಿಗೆದಾರರಿಂದ ಕಮಿಷನ್, ಎಸ್ಸೈ, ಇಂಜಿನಿಯರ್, ಶಿಕ್ಷಕರ ಹುದ್ದೆಯಲ್ಲಿ ಹಗರಣ ಮಾಡಿದೆ. ಮಠ-ಮಂದಿರಗಳ ಮತ್ತು ಅನುದಾನಿತ ಶಾಲೆಗಳಿಗೆ ಬಿಡುಗಡೆ ಮಾಡಲಾದ ಅನುದಾನದಲ್ಲೂ ಕಮಿಷನ್ ಬಾಚಿ ಕೊಂಡಿವೆ ಎಂದರು.
ಕೇಂದ್ರ ಬಿಜೆಪಿ ಸರಕಾರವೂ ಕೂಡ ಕಳೆದ ೯ ವರ್ಷದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿಸಿವೆ. ಸ್ವಿಸ್ ಬ್ಯಾಂಕ್‌ನಲ್ಲಿರುವ ಹಣವನ್ನು ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದಿದ್ದರೂ ಹಣವನ್ನು ಆ ಬ್ಯಾಂಕ್‌ನಿಂದ ತರುವ ಪ್ರಯತ್ನವನ್ನೇ ಮಾಡಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರೂ ಆ ಭರವಸೆಯನ್ನು ಈಡೇರಿಸಿಲ್ಲ ಎಂದು ಅಶ್ವನಿ ಕುಮಾರ್ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಚೇತನ್ ಬೆಂಗರೆ, ಸುದರ್ಶನ್ ಜೈನ್, ಮುಹಮ್ಮದ್ ವಳವೂರು, ಸಲೀಂ, ಮೋಹನ್ ಕಲ್ಮಂಜ ಉಪಸ್ಥಿತರಿದ್ದರು.