‘ಬ್ಯಾಲೆಟ್ ಪೇಪರ್’ನಲ್ಲಿ ಚುನಾವಣೆ ನಡೆಸಿ, ಯಾರು ಗೆಲ್ಲುತ್ತಾರೆ ನೋಡೋಣ: ಮಾಯಾವತಿ
ಬೆಂಗಳೂರು, ಮೇ 5: ‘ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಜ ಬದಲಾಗಿ ಹಳೇ ಪದ್ಧತಿ ಬ್ಯಾಲೆಟ್ ಪೇಪರ್(ಮತಪತ್ರ)ಗಳ ಮೂಲಕ ನಡೆಸಿ, ಆಗ ಯಾರು ಗೆಲ್ಲುತ್ತಾರೆ ನೋಡೋಣ. ಏಕೆಂದರೆ, ನಾವೇ ಅಧಿಕಾರದ ಚುಕ್ಕಾಣಿ ಹಿಡಿಯುವ ಭಯ ತಮ್ಮ ವಿರೋಧಿಗಳಿಗೆ ಇದೆ’ ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ)ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ತಿಳಿಸಿದ್ದಾರೆ.
ಶುಕ್ರವಾರ ಅರಮನೆ ಮೈದಾನದಲ್ಲಿ ಬಿಎಸ್ಪಿ ರಾಜ್ಯ ಘಟಕ ಆಯೋಜಿಸಿದ್ದ ರಾಜ್ಯ ಮಟ್ಟದ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಕೇಂದ್ರ ಸರಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಸುವಂತೆ ಈಗಾಗಲೇ ಹಲವು ಬಾರಿ ಒತ್ತಾಯ ಮಾಡಿದ್ದೇವೆ. ಆದರೆ, ಇದಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಅಲ್ಲದೆ, ಬ್ಯಾಲೆಟ್ ಪೇಪರ್‍ನಲ್ಲಿ ಚುನಾವಣೆ ನಡೆಸಿದಾಗ ನಾಲ್ಕು ಬಾರಿ ಬಿಎಸ್ಪಿ ಅಧಿಕಾರಕ್ಕೇ ಬಂದಿದೆ. ಈ ಭಯದಿಂದಲೇ ಇವಿಎಂ ಬಳಕೆ ಮಾಡಲಾಗುತ್ತಿದೆ’ ಎಂದು ದೂರಿದರು.
‘ಯಂತ್ರಗಳ ಮೂಲಕ ಜನರನ್ನು ವಂಚಿಸಲು ಫಲಿತಾಂಶಗಳನ್ನು ಏರುಪೇರು ಮಾಡಲು ಅವಕಾಶಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಿದವರಿಗೆ ಬಿಟ್ಟರೆ ಮತ್ಯಾರಿಗೂ ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಇದರ ಬಗ್ಗೆ ಬಹಳಷ್ಟು ಪಕ್ಷಗಳು ಹೋರಾಟಕ್ಕಿಳಿದಿವೆ’ ಎಂದ ಅವರು, ‘ಮುನ್ಸಿಪಲ್ ಕಾರ್ಪೊರೇಶನ್ ಸೇರಿದಂತೆ ಎಲ್ಲ ಮಾದರಿಯ ಮತದಾನವನ್ನು ಬ್ಯಾಲೆಟ್ ಪೇಪರ್‍ಗಳನ್ನು ಬಳಸಿ ನಡೆಸಬೇಕು. ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿರಬೇಕು. ಇದು ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮ ಬೇಡಿಕೆಯಾಗಿದ್ದು, ಇವಿಎಂ ವಿರುದ್ಧ ತಮ್ಮ ಆಂದೋಲನ ಮುಂದುವರೆಯಲಿದೆ’ ಎಂದು ಅವರು ಪ್ರಕಟಿಸಿದರು.
‘ನಾವು ಮೌನವಾಗಿ ಕೆಲಸ ಮಾಡುವವರು. ಇತರ ಪಕ್ಷಗಳಂತಲ್ಲ. ನಮ್ಮ ಪಕ್ಷ ಸದ್ದಿಲ್ಲದೆ ಕೆಲಸ ಮಾಡುತ್ತದೆ. ಬಿಜೆಪಿ, ಕಾಂಗ್ರೆಸ್ ಪ್ರಣಾಳಿಕೆ ಹೆಸರಿನಲ್ಲಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತದೆ. ಇಷ್ಟು ದಶಕಗಳಲ್ಲಿ ಅವರಿಗೆ ಎಷ್ಟು ಅವಕಾಶ ನೀಡಿದರೂ ಪ್ರಯೋಜನವಾಗಿಲ್ಲ. ಹಲವು ರಾಜ್ಯಗಳಿಂದ ಈ ಪಕ್ಷಗಳು ಯಾವುದೇ ಜನಹಿತ ಕೆಲಸಗಳನ್ನೆ ಮಾಡಿಲ್ಲ. ನಾವು ಉತ್ತರ ಪ್ರದೇಶದಲ್ಲಿ ಜಾರಿಗೆ ತಂದ ಹಲವು ಯೋಜನೆಗಳ ಲಾಭವನ್ನು ಈಗಲೂ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
‘ಉತ್ತರ ಪ್ರದೇಶ ರಾಜ್ಯದಲ್ಲಿ ದಲಿತರ, ಶೋಷಿತರ ಕೊಲೆ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ಕೃತ್ಯಗಳು ಜಾತಿವಾದಿಗಳಿಂದ ನಡೆಯುತ್ತಿರುವುದು ಖಂಡನೀಯ. ನಾವು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಜಾತಿವಾದಿಗಳಿಗೆ ಹೆಡೆಮುರಿ ಕಟ್ಟುತ್ತಿದ್ದೇವು.ಆದರೆ, ಈಗ ಅಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದೆ. ಹಗಲಿನಲ್ಲಿಯೇ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ’ ಎಂದು ಮಾಯಾವತಿ ಅಸಮಾಧಾನ ವ್ಯಕ್ತಪಡಿಸಿದರು.
‘ಚುನಾವಣೆ ಫಲಿತಾಂಶಗಳು ಉದ್ಯಮಿಗಳ ಪರ ಬರುತ್ತಿವೆ. ಆದರೆ, ಬಹುಜನರಾದ ದಲಿತರು, ಹಿಂ.ವರ್ಗಗಳು, ಅಲ್ಪಸಂಖ್ಯಾತರು ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ತಮ್ಮ ಮತಗಳನ್ನು ಸಣ್ಣ ಆಸೆ, ಆಮಿಷಗಳಿಗೆ ಮಾರಾಟ ಮಾಡಿಕೊಳ್ಳದೆ, ಬಿಎಸ್ಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಣತೊಡಬೇಕಾಗಿದೆ. ಇನ್ನೂ, ಈ ಬಾರಿ ಪುಲಕೇಶಿ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಪಕ್ಷದ ಚಿನ್ಹೆಯಡಿ ಕಣಕ್ಕಿಳಿದಿದ್ದಾರೆ. ಗಾಂಧಿನಗರ ಕ್ಷೇತ್ರದಿಂದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸ್ಪರ್ಧಿಸಿದ್ದಾರೆ. ಒಟ್ಟಾರೆ, ರಾಜ್ಯವ್ಯಾಪಿ 130 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಗೆಲ್ಲುವ ಭರವಸೆ ನನಗಿದೆ’ ಎಂದು ಮಾಯಾವತಿ ನುಡಿದರು.
ಕರ್ನಾಟಕ ಉಸ್ತುವಾರಿ ಮಾರಸಂದ್ರಮುನಿಯಪ್ಪ ಮಾತನಾಡಿ, ‘ರಾಜಕೀಯ ಅನುಭವ ಇಲ್ಲದ ಜನರಿಗೆ ರಾಜ್ಯಾಧಿಕಾರ ನಡೆಸಲು ದಾರಿ ತೋರಿಸಿದ ನಾಯಕ ಮಾನ್ಯವಾರ್ ಕಾನ್ಶಿರಾಮ್ ಅವರು. ಬಹುಜನ ಸಮಾಜವನ್ನು ಆಳುವ ವರ್ಗವನ್ನಾಗಿ ಮಾಡುವ ಉದ್ದೇಶ ಹೊಂದಿದ್ದರು. ಆದರೆ, ಬಿಜೆಪಿ, ಕಾಂಗ್ರೆಸ್ ಸಂವಿಧಾನ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದು, ಖಾಸಗಿಕರಣ, ಉದಾರಿಕರಣ ಜಾಗತಿಕರಣಕ್ಕೆ ಮುಂದಾಗಿ ತುಳಿತಕ್ಕೊಳಗಾದ ಜನರಿಗೆ ಸರಕಾರಿ ನೌಕರಿ ವಂಚಿಸುತ್ತಿದ್ದಾರೆ. ಸರಕಾರಿ ಸಂಸ್ಥೆ ಬಂದ್ ಮಾಡಿ ಖಾಸಗೀಯವರ ಆಳುಗಳಾಗಿ ಕೆಲಸ ಮಾಡುವ ವ್ಯವಸ್ಥೆ ನಿರ್ಮಿಸುತ್ತಿದ್ದಾರೆ. ಹೀಗಾಗಿ, ಈ ಬಾರಿಯ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಿ, ಬಿಎಸ್ಪಿಯನ್ನು ಅಧಿಕಾರಕ್ಕೆ ತರಬೇಕು’ ಎಂದು ಕರೆ ನೀಡಿದರು.
ಬಿಎಸ್ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್ ಸಿದ್ದಾರ್ಥ, ಬಿಎಸ್ಪಿ ರಾಜ್ಯ ಸಂಚಾಲಕ ಎಂ.ಗೋಪಿನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ಬಿಎಸ್ಪಿ ಅಭ್ಯರ್ಥಿಗಳಾದ ಅಖಂಡ ಶ್ರೀನಿವಾಸಮೂರ್ತಿ, ಎ.ಜೆ.ಖಾನ್, ಬೆಂಬಲಿತ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.