ಕಸೆ ಸೀರೆ, ಯಕ್ಷ ಸೀರೆಗುಂಟು ಭಾರೀ ಬೇಡಿಕೆ; ಆದರೆ ನೇಕಾರರದೇ ಕೊರತೆ

ಉಡುಪಿ, ಮೇ 5: ಬಡಗುತಿಟ್ಟು ಯಕ್ಷಗಾನದ ಪುರುಷ ವೇಷಧಾರಿಗಳು ಉಡುವ ಯಕ್ಷಗಾನ ಕಸೆ ಸೀರೆಯ ನೇಯ್ಗೆ ಕೋವಿಡ್-19ರ ಸಂದರ್ಭದಲ್ಲಿ ನಿಂತ್ತಿತ್ತಾದರೂ, ಅದನ್ನು ಹೆಣ್ಮಕ್ಕಳು ಉಡುವ ಯಕ್ಷ ಸೀರೆಯಾಗಿ ಬದಲಿಸಿ ಮಾರುಕಟ್ಟೆಗೆ ಇಳಿಸಿದಾಗ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
ಉಡುಪಿ ಸೀರೆಯ ಕುರಿತಂತೆ ಪ್ರಾರಂಭದಿಂದಲೂ ಅವಿರತವಾಗಿ ದುಡಿಯುತ್ತಿರುವ ಕದಿಕೆ ಟ್ರಸ್ಟ್‌ನ ಮಮತಾ ರೈ ಅವರ ಪರಿಶ್ರಮದಿಂದ ಕಿನ್ನಿಗೋಳಿಯ ತಾಳಿಪ್ಪಾಡಿ ಸೊಸೈಟಿಯಲ್ಲಿ ಯಕ್ಷಗಾನದ 40 ಕೌಂಟ್‌ನ 8.25ಮೀ. ಉದ್ದದ ಕಸೆ ಸೀರೆಯನ್ನು ಹೆಣ್ಮಕ್ಕಳು ಉಡುವಂತೆ 5.50 ಮೀ.ಯಕ್ಷ ಸೀರೆಯಾಗಿ ಮಾರ್ಪಡಿಸುವ ಪ್ರಯೋಗ ಯಶಸ್ವಿಯಾಯಿತು.
ಈಗ ಮತ್ತೆ ಯಕ್ಷಗಾನ ಮೇಳಗಳು ತಮ್ಮ ನಿಯಮಿತ ಪ್ರದರ್ಶನ ನೀಡುತ್ತಿರುವುದರಿಂದ ಈಗ ಯಕ್ಷಗಾನದ ಕಸೆ ಸೀರೆ ಜೊತೆ ಜೊತೆಗೆ ಹೆಣ್ಮಕ್ಕಳು ಉಡುವ ಯಕ್ಷ ಸೀರೆಗೂ ಬೇಡಿಕೆ ಚೆನ್ನಾಗಿದೆ.
ಆದರೆ ಕಸೆ ಸೀರೆ ಹಾಗೂ ಯಕ್ಷ ಸೀರೆ ತಯಾರಿಸುವ ನೇಕಾರರು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಬೆರಳೆಣಿಕೆಯ ಷ್ಟಿದ್ದಾರೆ. ಮಮತಾ ರೈ ಅವರು ಹೇಳುವಂತೆ ಈಗ ಕೇವಲ ನಾಲ್ಕು ಮಂದಿ ಮಾತ್ರ ಯಕ್ಷ ಸೀರೆಯ ನೆಯ್ಗೆಯಲ್ಲಿ ನಿರತರಾಗಿದ್ದಾರೆ. ಉಡುಪಿ ಇಂದಿರಾನಗರದ ಜಾರ್ಜ್ ಅಮ್ಮನ್ನ, ಲಕ್ಷ್ಮಣ ಶೆಟ್ಟಿಗಾರ್, ಚಂದ್ರಾವತಿ ತಾಳಿಪಾಡಿ ಹಾಗೂ ಕೃಷ್ಣ ಶೆಟ್ಟಿಗಾರ್ ಗುಂಡ್ಮಿ ಇವರನ್ನು ಹೊರತು ಪಡಿಸಿ ಯುವ ನೇಕಾರರು ಇದರತ್ತ ಆಕರ್ಷಿತರಾ ಗುತ್ತಿಲ್ಲ ಎಂದವರು ಹೇಳುತ್ತಾರೆ.
ನೇಕಾರರು ವಾರಕ್ಕೆ ತಯಾರಿಸುವ ನಾಲ್ಕೈದು ಕಸೆ/ಯಕ್ಷ ಸೀರೆಯನ್ನು ಸೊಸೈಟಿಗಳು ನೇಕಾರರ ಮನೆಗೇ ಬಂದು ಒಯ್ಯುತ್ತಿವೆ. ಯಕ್ಷ ಸೀರೆಗೆ ಕರಾವಳಿಯಿಂದ ಬೇಡಿಕೆ ಇದೆ. ಕೆಲವು ಸಂಘಸಂಸ್ಥೆಗಳು ಯಕ್ಷ ಸೀರೆಯನ್ನು ಸಮವಸ್ತ್ರದ ನೆಲೆಯಲ್ಲಿ ಖರೀದಿಸುತ್ತಿವೆ. ಒಂದು ಕಸೆ ಸೀರೆಗೆ 1,750 ರೂ. ಬೆಲೆ ಇದ್ದರೆ, ಯಕ್ಷ ಸೀರೆಗೆ 1,200ರೂ. (ರಿಯಾಯಿತಿ ಸಹಿತ) ದರವಿದೆ.
ಜಿಲ್ಲೆಯಲ್ಲಿರುವ ಬಡಗುತಿಟ್ಟು ಮೇಳಗಳು ಹಾಗೂ ಯಕ್ಷಗಾನ ವೇಷಭೂಷಣ ಪ್ರಸಾಧನ ಸಂಸ್ಥೆಗಳು ವರ್ಷಕ್ಕೆ ಸುಮಾರು 200ರಿಂದ 250ರಷ್ಟು ಕಸೆ ಸೀರೆ ಖರೀದಿ ಮಾಡುತ್ತಿವೆ. ಆದರೆ ಯಕ್ಷ ಸೀರೆಗೆ ಆನ್ ಲೈನ್‌ನಲ್ಲಿ ಅಧಿಕ ಬೇಡಿಕೆ ಇದೆ.
ಕೈಮಗ್ಗದಲ್ಲಿ ತಯಾರಾಗುವ ಉಡುಪಿ ಸೀರೆಯ ಪುನಶ್ಚೇತನಕ್ಕೆ ಕಾರಣರಾಗಿರುವ ಕಾರ್ಕಳ ಕದಿಕೆ ಟ್ರಸ್ಟ್‌ನ ಮಮತಾ ರೈ ಮತ್ತು ಚಿಕ್ಕಪ್ಪ ಶೆಟ್ಟಿ ದಂಪತಿಗಳ ಪರಿಶ್ರಮದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 5 ಸೊಸೈಟಿಗಳಲ್ಲಿದ್ದ 42 ನೇಕಾರರ ಸಂಖ್ಯೆ ಈಗ 68ಕ್ಕೇರಿದೆ.
ಎರಡು-ಮೂರು ದಶಕಗಳ ಹಿಂದಿನವರೆಗೂ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ನೇಕಾರರ ಮಕ್ಕಳು ಕಡಿಮೆ ಕೂಲಿಯೂ ಸೇರಿದಂತೆ ವಿವಿಧ ಕಾರಣಗಳಿಗಾಇ ಇಂದು ನೇಕಾರಿಕೆ ಕಲಿಯದೆ ಅನ್ಯ ಉದ್ಯೋಗ ದತ್ತ ಮುಖ ಮಾಡುತಿದ್ದಾರೆ. ಕೈಮಗ್ಗಕ್ಕಿಂತಲೂ ಇಂದು ಪವರ್ ಲೂಮ್‌ನ ಸೀರೆ ಇಂದು ವೈವಿಧ್ಯತೆಯೊಂದಿಗೆ ಮಾರುಕಟ್ಟೆಯನ್ನು ಆಕ್ರಮಿಸಿದೆ. ಯುವ ಜನತೆಯ ಬದಲಾದ ಫ್ಯಾಷನ್ ಅಭಿರುಚಿಯು ಕೈಮಗ್ಗದ ಅವನತಿಗೆ ಕಾರಣವೆನ್ನಬಹುದು.
ಮಣಿಪಾಲ ಮಾಹೆ ಯ ಗಾಂಧಿಯನ್ ಸೆಂಟರ್‌ನಲ್ಲಿ ಎರಡು ದಿನಗಳ ಕಾಲ ನಡೆಯುವ ಉಡುಪಿ ಸೀರೆ ಪ್ರದರ್ಶನದಲ್ಲಿ(ನೇಯ್ಗೆ) ಕೈಮಗ್ಗ ನೇಕಾರಿಕೆಯ ಒಳಹೊರಗನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತಿದೆ.
*55 ವರ್ಷಗಳಿಂದ ನೇಕಾರಿಕೆಯಿಂದಲೇ ಬದುಕು ಸಾಗಿಸುತಿದ್ದೇನೆ. ಇದರ ದುಡಿಮೆಯಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದೇನೆ. ಇದರಲ್ಲಿ ಗಳಿಕೆ ಕಡಿಮೆಯಾದರೂ ಕಠಿಣ ಪರಿಶ್ರಮದ ಖುಷಿಯಿದೆ.
-ಜಾರ್ಜ್ ಅಮ್ಮನ್ನ, ಇಂದಿರಾ ನಗರ ಉಡುಪಿ.
ಇಂದು ಉಡುಪಿ ಸೀರೆಯನ್ನು ವಿದ್ಯಾರ್ಥಿನಿಯರು, ಯುವತಿಯರು ತೊಡುತಿದ್ದಾರೆ, ಇತರರಿಗೆ ಉಡುಗೊರೆಯಾಗಿ ನೀಡುತಿದ್ದಾರೆ. ಉಡುಪಿ ಸೀರೆಯ ಲೇಬಲ್ ಮೇಲೆ ನೇಕಾರರ ಭಾವಚಿತ್ರ, ಹೆಸರನ್ನು ಅಚ್ಚು ಹಾಕಲಾಗುತ್ತಿದೆ. ಬೇಡಿಕೆ ಇರುವ ಯಕ್ಷಗಾನ ಕಸೆ/ಯಕ್ಷ ಸೀರೆಗಳಿಗೆ ನೇಕಾರರ ಅಗತ್ಯವಿದೆ.
-ಮಮತಾ ರೈ, ಕದಿಕೆ ಟ್ರಸ್ಟ್ ಕಾರ್ಕಳ.