ನಾಮಪತ್ರ ಸಲ್ಲಿಸಿದ ಬಳಿಕ ಬಿಜೆಪಿಯಿಂದ ಅನೇಕ ಕಿರುಕುಳ: ಆಶೋಕ್ ಕುಮಾರ್ ರೈ ಆರೋಪ
ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ನಾನು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ನನಗೆ ಬಿಜೆಪಿಯಿಂದ ಅನೇಕ ಕಿರುಕುಳ ಆರಂಭ ವಾಗಿದೆ. ನಾನು ಹೋದಲ್ಲಿ, ಬಂದಲ್ಲೆಲ್ಲಾ ನನ್ನ ಹಿಂದೆಯೇ ಜನರನ್ನು, ಅಧಿಕಾರಿಗಳನ್ನು ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದರೆ ಈ ಎಲ್ಲಾ ಹಿಂಸೆಗಳನ್ನು ಸಹಿಸಿ ನಾನು ಹಲವು ದಿನಗಳಿಂದ ಕ್ಷೇತ್ರದಾದ್ಯಂತ ಓಡಾಟ ನಡೆಸುತ್ತಿದ್ದೇನೆ. ಜನರ ಆಶೀರ್ವಾದವಿದ್ದಲ್ಲಿ ಇಂತಹ ಎಲ್ಲಾ ಕಿರುಕುಳಗಳನ್ನು ಸಹಿಸುವ ಶಕ್ತಿ ನನಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆಶೋಕ್ ಕುಮಾರ್ ರೈ ಹೇಳಿದರು.
ಅವರು ತನ್ನ ಹುಟ್ಟೂರಾದ ಕೋಡಿಂಬಾಡಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಶೋಕ್ ರೈ ಅವರು ತಾಯಿಯ ಆಶೀರ್ವಾದದ ಜೊತೆಗೆ ಹುಟ್ಟೂರಿನ ಬಂಧುಗಳ ಆಶೀರ್ವಾದವನ್ನು ನಾನು ಬೇಡುತ್ತಿದ್ದೇನೆ. ನಿಮ್ಮ ಮನೆ ಮಗ ನಾಗಿ ನನ್ನನ್ನು ಸ್ವೀಕರಿಸಿ ಆಶೀರ್ವಾದ ಮಾಡುತ್ತೀರಿ ಎಂಬುದಕ್ಕೆ ಸೇರಿದ ಜನ ಸಮೂಹವೇ ಸಾಕ್ಷಿಯಾಗಿದೆ. ಓರ್ವ ಶಿಕ್ಷಕನಾಗಿ ಹತ್ತೂರಿನ ಮಕ್ಕಳಿಗೆ ಅಕ್ಷರ ನೀಡಿ ಸಂಸ್ಕಾರವಂತರಾಗಿ ಮಾಡಿರುವ ಸಂಜೀವ ರೈ ಅವರ ಪುತ್ರನಾದ ನನಗೆ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿ ಎಂದರು.
ಕಾಂಗ್ರೆಸ್ ಮುಖಂಡ ಪಂಜಿಗುಡ್ಡೆ ಈಶ್ವರಭಟ್ ಮಾತನಾಡಿ ಬಿಜೆಪಿಯು ಹಿಂದುತ್ವದ ಹೆಸರಿನಲ್ಲಿ ಅಮಾಯಕ ಯುವಕರನ್ನು ಹಾಳುಮಾಡಿ ಜೈಲಿಗೆ ತಳ್ಳುವ ಕೆಲಸ ಮಾಡುತ್ತಿದೆ. ಮಸೀದಿಗೆ, ಚರ್ಚಿಗೆ ಕಲ್ಲೆಸೆಯುವ, ಅಧಿಕಾರ ಕ್ಕಾಗಿ ಜನರ ಭಾವನೆ ಒಡೆಯುವ ಬಿಜೆಪಿಯದ್ದು ನಕಲಿ ಹಿಂದುತ್ವ, ಅದು ಬಿಜೆಪಿ ಅಧಿಕಾರಕ್ಕಾಗಿ ಜನರ ಭಾವನೆ ಒಡೆಯುವ ಹಿಂದುತ್ವವಾಗಿದೆ. ದೇಶದಲ್ಲಿ ಅತೀ ಹೆಚ್ಚು ಗೋಮಾಂಸ ರಫ್ತು ಮಾಡುವುದು ಉತ್ತರಪ್ರದೇಶದಲ್ಲಿ, ಅದೇ ರಾಜ್ಯದ ಮುಖ್ಯಮಂತ್ರಿ ಪುತ್ತೂರಿಗೆ ಬಂದು ಗೋರಕ್ಷಣೆಯ ಬಗ್ಗೆ ಮಾತನಾಡುವುದು ಯಾಕೆ ಎಂಬುದನ್ನು ಬಜರಂಗದಳದವರು ಪ್ರಶ್ನಿಸಬೇಕಾಗಿದೆ. ಬೆಲೆ ಏರಿಕೆ ಬಿಜೆಪಿ ಸಾಧನೆಯಾದರೆ ಲಂಚ ಮತ್ತು ಮಂಚ ಬಿಜೆಪಿಗರಿಗೆ ಪ್ರಿಯವಾದ ಸಾಧನವಾಗಿದೆ ಎಂದು ಹೇಳಿದರು.
ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಮುಖಂಡರಾದ ಮಹಮ್ಮದ್ ಬಡಗನ್ನೂರು, ಉಮಾನಾಥ ಶೆಟ್ಟಿ, ಭಾಸ್ಕರ ಗೌಡ ಕೋಡಿಂಬಾಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.