ಬಿಜೆಪಿ ತಾರಾ ಪ್ರಚಾರಕರ ಹೆಸರು ಬಳಕೆ ಆರೋಪ: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ದೂರು

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯ ತಾರಾ ಪ್ರಚಾರಕರನ್ನು ಕಾನೂನು ಬಾಹಿರವಾಗಿ ತನ್ನ ಪ್ರಚಾರಕ್ಕೆ ಜಾಹೀರಾತು ನೀಡುವ ಮೂಲಕ ಬಳಸಿಕೊಳ್ಳುತ್ತಿದ್ದು, ತಕ್ಷಣವೇ ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಅಭ್ಯರ್ಥಿಯ ಚುನಾವಣಾ ಏಜೆಂಟ್ ರಾಜೇಶ್ ಬನ್ನೂರು ಅವರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಯ ತಾರಾ ಪ್ರಚಾರಕರಾದ ಆದಿತ್ಯನಾಥ ಹೆಸರನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಪತ್ರಿಕೆಗಳಲ್ಲಿ ಸ್ವಾಗತಿಸುವ ಜಾಹೀರಾತು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಮೊದಲು ಅವರ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ಎರಡು ಬಾರಿ ದೂರು ನೀಡಲಾಗಿದೆ. ಇದೀಗ ಮತ್ತೊಮ್ಮೆ ನಮ್ಮ ತಾರಾ ಪ್ರಚಾರಕರ ಹೆಸರನ್ನು ಬಳಸಿ ಚುನಾವಣಾ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ತಕ್ಷಣವೇ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅಥವಾ ಅವರ ಅಭಿಮಾನಿಗಳ ಹೆಸರಿನಲ್ಲಿ ಜಾಹೀರಾತು ನೀಡದಂತೆ ಸಂಬಂಧ ಪಟ್ಟ ಪತ್ರಿಕೆಗಳಿಗೆ ನೋಟೀಸು ಜಾರಿಗೊಳಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.