ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಪ್ರಚಾರ ಆರೋಪ: ಗಡಿಪಾರಾಗಿದ್ದ ರೌಡಿಶೀಟರ್ ಕೋಡಿಕೆರೆ ಲೋಕೇಶ್ ಮತ್ತೆ ಗಡಿಪಾರು

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಿಂದ ಗಡಿಪಾರಾಗಿದ್ದ ರೌಡಿಶೀಟರ್ ಕೋಡಿಕೆರೆ ಲೋಕೇಶ್‌ನನ್ನು ಮಂಗಳೂರು ಪೊಲೀಸರು ಬಂಧಿಸಿ ಮತ್ತೆ ಗಡಿಪಾರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆಯ ಹಿನ್ನೆಲೆಯಲ್ಲೇ ಈತನನ್ನು ಈ ಹಿಂದೆ ಶಿವಮೊಗ್ಗ ಜಿಲ್ಲೆಗೆ ಗಡಿಪಾರು ಮಾಡಲಾಗಿತ್ತು. ಈ ಆದೇಶವನ್ನು ಉಲ್ಲಂಘಿಸಿ ಈತ ಮತ್ತೆ ಜಿಲ್ಲೆಗೆ ಪ್ರವೇಶಿಸಿದ್ದ ಎಂದು ಹೇಳಲಾಗುತ್ತಿದೆ.
ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ಮೇ 4ರಂದು ರೌಡಿಶೀಟರ್ ಕೋಡಿಕೆರೆ ಲೋಕೇಶ್ ಯಾನೆ ಲೋಕು ಎಂಬಾತ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಪ್ರಚಾರ ಮಾಡುತ್ತಿದ್ದ ಎಂದು ಸಾರ್ವಜನಿಕರು ದ.ಕ.ಜಿಲ್ಲಾ ಎಸ್ಪಿಗೆ ಮಾಹಿತಿ ನೀಡಿದ್ದರು. ಈ ವಿಷಯ ತಿಳಿದುಕೊಂಡ ರೌಡಿಶೀಟರ್ ಲೋಕೇಶ್ ಅಲ್ಲಿಂದ ತಪ್ಪಿಸಿಕೊಂಡ ಎನ್ನಲಾಗಿದೆ.
ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಗುರುವಾರ ರಾತ್ರಿ ಬಂಟ್ವಾಳ ಪರಿಸರದಿಂದ ಬಂಧಿಸಿದ್ದಾರೆ. ಅಲ್ಲದೆ ಗುಲ್ಬರ್ಗಕ್ಕೆ ಗಡಿಪಾರು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Next Story