ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ ಬಗ್ಗೆ ಅಮೆರಿಕಕ್ಕೆ ಅರಿವಿತ್ತು: ರಶ್ಯ ಆರೋಪ

ಮಾಸ್ಕೊ, ಮೇ 5: ಅಮೆರಿಕದ ಅರಿವಿಗೆ ಬಾರದೆ ಕ್ರೆಮ್ಲಿನ್ ಮೇಲೆ ಡ್ರೋನ್ ದಾಳಿ ನಡೆಯಲು ಸಾಧ್ಯವಿರುತ್ತಿರಲಿಲ್ಲವೆಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯಿ ಲಾವ್ರೊವ್ ಶುಕ್ರವಾರ ತಿಳಿಸಿದ್ದಾರೆ.
‘‘ತಮ್ಮ ಸೂತ್ರಧಾರಿಗಳ ಅರಿವಿಗೆ ಬಾರದೆ, ಕೀವ್‌ನ ಭಯೋತ್ಪಾದಕರು ಈ ದಾಳಿಯನ್ನು ನಡೆಸಲು ಸಾಧ್ಯವಿರಲಿಲ್ಲ’’ ಎಂದು ಲಾವ್ರೊವ್ ಅವರು ಅಮೆರಿಕವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಾ ಹೇಳಿದ್ದಾರೆ.
ಕ್ರೆಮ್ಲಿನ್ ಮೇಲೆ ನಡೆದ ಡ್ರೋನ್ ದಾಳಿಯನ್ನು ತಾನು ವಿಫಲಗೊಳಿಸಿರುವುದಾಗಿ ರಶ್ಯವು ಬುಧವಾರ ತಿಳಿಸಿದೆ. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಹತ್ಯೆಗೆ ಉಕ್ರೇನ್ ನಡೆಸಿದ ಯತ್ನ ಇದಾಗಿದೆ. ಇವುಗಳಿಗೆ ನಾವು ಅತ್ಯಂತ ದೃಢವಾದ ಕ್ರಮಗಳ ಮೂಲಕ ಉತ್ತರ ನೀಡಲಿದ್ದೇವೆ’’ ಎಂದು ಲಾವ್ರೋವ್ ಶುಕ್ರವಾರ ತಿಳಿಸಿದ್ದಾರೆ.
ಆದರೆ ಕ್ರೆಮ್ಲಿನ್ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ತನ್ನ ಕೈವಾಡವಿರುವುದನ್ನು ಉಕ್ರೇನ್ ನಿರಾಕರಿಸಿದೆ. ಮಾಸ್ಕೊವನ್ನಾಗಲಿ ಅಥವಾ ಪುಟಿನ್‌ರ ಮೇಲಾಗಲಿ ನಾವು ದಾಳಿ ನಡೆಸುವುದಿಲ್ಲವೆಂದು ಅವರು ಹೇಳಿದ್ದಾರೆ.
ಅಮೆರಿಕ ಕೂಡಾ ಡ್ರೋನ್ ದಾಳಿಯಲ್ಲಿ ತಾನು ಶಾಮೀಲಾಗಿರುವುದನ್ನು ತಳ್ಳಿಹಾಕಿದ್ದು, ಕ್ರೆಮ್ಲಿನ್ ತನ್ನ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆಪಾದಿಸಿದೆ.