ವೈದ್ಯಕೀಯ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ಇಲಾಖೆ ಹಂತದಲ್ಲೇ ವಜಾ ಮಾಡಿದ ಅಧಿಕಾರಿಗಳು: ಆರೋಪ

ಬೆಂಗಳೂರು, ಮೇ 5: ‘ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿ ವೈದ್ಯಕೀಯ ಉನ್ನತ ಅಧಿಕಾರಿಗಳು ನಡೆಸಿರುವ ಭ್ರಷ್ಟಾಚಾರವನ್ನು ಇಲಾಖಾ ಮಟ್ಟದ್ದಲ್ಲಿಯೇ ವಿಚಾರಣೆ ಮಾಡಿ ಪ್ರಕರಣವನ್ನು ವಜಾ ಮಾಡಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಮ್ ಸಿ. ಆರೋಪಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ‘ಸಚಿವ ಡಾ.ಸುಧಾಕರ್, ಆರೋಗ್ಯ ಇಲಾಖೆಯ ಆಯುಕ್ತ ಡಾ.ರಂದೀಪ್ ಮತ್ತು ಉಪನಿರ್ದೇಶಕ ಡಾ.ನಾರಾಯಣ್ ಸೇರಿ 108 ಆಂಬ್ಯುಲೆನ್ಸ್ ಸೇವೆಯ ಟೆಂಡರ್‍ನಲ್ಲಿ ತಮ್ಮ ಮೇಲೆ ಬಂದಿರುವ ಭ್ರಷ್ಟಾಚಾರದ ಪ್ರಕರಣವನ್ನು ಮೇಲ್ನೋಟಕ್ಕೆ ಕೇವಲ ತಮ್ಮ ಇಲಾಖೆಯಲ್ಲೇ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಟೆಂಡರ್ ನಲ್ಲಿ ನಡೆದಿರುವ ಎಲ್ಲಲೋಪದೋಷಗಳನ್ನು ಮುಚ್ಚಿ ಹಾಕಿ ಎಜುಸ್ಪಾರ್ಕ್ ಇಂಟರ್‍ನ್ಯಾಷನಲ್ ಪ್ರೈವೈಟ್ ಲಿಮಿಟೆಡ್ ಸಂಸ್ಥೆಗೆ 108 ಆಂಬ್ಯುಲೆನ್ಸ್ ಸೇವೆಯ 1,260 ಕೋಟಿ ರೂ.ಟೆಂಡರ್ ನೀಡಲು ಸಚಿವ ಡಾ.ಸುಧಾಕರ್ 100ಕೋಟಿ ರೂ., ಆಯುಕ್ತರು 10ಕೋಟಿ ರೂ., ಉಪನಿರ್ದೇಶಕ ಡಾ. ನಾರಾಯಣ 10 ಕೋಟಿ ರೂ., ನಿರ್ದೇಶಕರು 2ಕೋಟಿ ರೂ.ಸಮಿತಿಯ ಎಲ್ಲ ಸದಸ್ಯರುಗಳಿಗೂ ತಲಾ 1 ಕೋಟಿ ರೂ.ಲಂಚ(ಕಮೀಷನ್) ನೀಡಲಾಗಿರುತ್ತದೆ ಎಂದು ಆರೋಪಿಸಿದ್ದಾರೆ.
ಇಲಾಖೆಯ ಉಪನಿರ್ದೇಶಕ ಡಾ.ನಾರಾಯಣ ಹೋಟೆಲ್‍ನಲ್ಲಿ ಲಂಚ ಪಡೆಯುವ ವೇಳೆ ಸಿಕ್ಕಿಹಾಕಿಕೊಂಡಿದ್ದು, ಅದರ ಫೋಟೋಗಳು ಮತ್ತು ಪ್ರಕರಣದ ವಿವರಗಳು ದೊರೆತಿವೆ. ಸಚಿವರು, ಆಯುಕ್ತ ಮತ್ತು ಡಾ.ನಾರಾಯಣ್ ಇವರುಗಳು ಎಜುಸ್ಪಾರ್ಕ್ ಸಂಸ್ಥೆಯ ಪ್ರತಿನಿಧಿಯಾದ ವಿನೀಶ್ ಇವರೊಂದಿಗೆ ಸಚಿವರ ಸದಾಶಿವನಗರ ನಿವಾಸದ ನೆಲಮಹಡಿಯ ರೂಮಿನಲ್ಲಿ ಕಮೀಷನ್ ಹಣವನ್ನು ಪಡೆಯುವ ಮತ್ತು ಹಂಚಿಕೆ ಕುರಿತಾದ ಚರ್ಚೆಗಳ ಫೋಟೋಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಉಲ್ಲೇಖಿಸಿದ್ದಾರೆ.
ಈ ವಿಷಯದ ಬಗ್ಗೆ ಕೇವಲ ಇಲಾಖಾ ಮಟ್ಟದಲ್ಲಿ ಬೇಕಾದ ಅಧಿಕಾರಿಗಳಿಂದ ತನಿಖೆ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕುವ ಬದಲಿಗೆ ಉನ್ನತಮಟ್ಟದಲ್ಲಿ ಅಂದರೆ ಸಿಐಡಿ ಮತ್ತು ಲೋಕಾಯುಕ್ತದಿಂದ ತನಿಖೆ ನಡೆಸಿ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ಒತ್ತಾಯಸಿದ್ದಾರೆ.