ಐಪಿಎಲ್: ರಾಜಸ್ಥಾನ ವಿರುದ್ಧ ಗುಜರಾತ್‌ಗೆ ಭರ್ಜರಿ ಜಯ
ರಶೀದ್ ಖಾನ್ ನೇತೃತ್ವದಲ್ಲಿ ಬೌಲರ್‌ಗಳ ಶಿಸ್ತುಬದ್ಧ ದಾಳಿ

ಜೈಪುರ, ಮೇ 5: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ 48ನೇ ಐಪಿಎಲ್ ಪಂದ್ಯದಲ್ಲಿ 9 ವಿಕೆಟ್‌ಗಳ ಅಂತರದಿಂದ ಭರ್ಜರಿ ದಾಖಲಿಸಿದೆ. ಈ ಮೂಲಕ ತಾನಾಡಿದ 10ನೇ ಪಂದ್ಯದಲ್ಲಿ 7ನೇ ಗೆಲುವು ದಾಖಲಿಸಿ ಒಟ್ಟು 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 119 ರನ್ ಗುರಿ ಪಡೆದ ಗುಜರಾತ್ ತಂಡ 13.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು.
ಇನಿಂಗ್ಸ್ ಆರಂಭಿಸಿದ ವೃದ್ದಿಮಾನ್ ಸಹಾ(ಔಟಾಗದೆ 41 ರನ್, 34 ಎಸೆತ) ಹಾಗೂ ಶುಭಮನ್ ಗಿಲ್(36 ರನ್, 35 ಎಸೆತ)9.4 ಓವರ್‌ಗಳಲ್ಲಿ 71 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಗಿಲ್ ಔಟಾದ ನಂತರ ಸಹಾ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(ಔಟಾಗದೆ 39 ರನ್, 15 ಎಸೆತ)2ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 48 ರನ್ ಸೇರಿಸಿ ಇನ್ನೂ 37 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ರಾಜಸ್ಥಾನ 118 ರನ್‌ಗೆ ಆಲೌಟ್: ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ರಶೀದ್ ಖಾನ್ (3-14) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿ 17.5 ಓವರ್‌ಗಳಲ್ಲಿ ಕೇವಲ 118 ರನ್‌ಗೆ ಆಲೌಟಾಯಿತು.
ರಾಜಸ್ಥಾನದ ಪರ ನಾಯಕ ಸಂಜು ಸ್ಯಾಮ್ಸನ್(30 ರನ್, 20 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಟ್ರೆಂಟ್ ಬೌಲ್ಟ್(15 ರನ್) ಹಾಗೂ ಯಶಸ್ವಿ ಜೈಸ್ವಾಲ್(14 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಗುಜರಾತ್ ಪರ ಸ್ಪಿನ್ನರ್ ರಶೀದ್ ಖಾನ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ನೂರ್ ಅಹ್ಮದ್(2-25) ಎರಡು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ(1-22), ಮುಹಮ್ಮದ್ ಶಮಿ(1-27) ಹಾಗೂ ಜೋಶ್ ಲಿಟಲ್(1-24) ತಲಾ ಒಂದು ವಿಕೆಟ್‌ಗಳನ್ನು ಕಬಳಿಸಿದರು. ಜೈಸ್ವಾಲ್ ಹಾಗೂ ಝಾಂಪ ರನೌಟಾದರು.