ನಾಗ್ಪುರ-ಮುಂಬೈ ವಿಮಾನದಲ್ಲಿ ಮಹಿಳೆಗೆ ಚೇಳು ಕಡಿತ

ಹೊಸದಿಲ್ಲಿ: ಹಾವು, ತಿಗಣೆ, ಇಲಿ ಹಾಗೂ ಹಕ್ಕಿ ಕೂಡಾ ವಿಮಾನದಲ್ಲಿ ಪತ್ತೆಯಾಗಿರುವ ಉದಾಹರಣೆಗಳಿವೆ. ಆದರೆ ಬಹುಶಃ ಇದೇ ಮೊದಲ ಬಾರಿಗೆ ವಿಮಾನಯಾನದ ವೇಳೆ ಮಹಿಳೆಯೊಬ್ಬರಿಗೆ ಚೇಳು ಕಡಿದ ಘಟನೆ ವರದಿಯಾಗಿದೆ. ವಿಮಾನದಿಂದ ಇಳಿದ ತಕ್ಷಣ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಆಸ್ಪತ್ರೆಯಲ್ಲಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆ ನಡೆದಿರುವುದು 2023ರ ಏಪ್ರಿಲ್ 23ರಂದು. ನಾಗ್ಪುರದಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ (ಎಐ 630) ವಿಮಾನದಲ್ಲಿ. ಈ ಸಂಬಂಧ ಮುಂಬೈ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿ ಮಹಿಳೆ ವಿಮಾನದಿಂದ ಇಳಿದ ತಕ್ಷಣ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯರ ತಂಡವನ್ನು ಕರೆಸುವಂತೆ ಕೋರಲಾಗಿತ್ತು. "ವಿಮಾನ ನಿಲ್ದಾಣದಲ್ಲಿ ವೈದ್ಯರ ತಂಡ ಮಹಿಳೆಗೆ ಚಿಕಿತ್ಸೆ ನೀಡಿತು. ಆಸ್ಪತ್ರೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಲಾಗಿದೆ. ಮಹಿಳೆಯ ಆರೋಗ್ಯ ಸ್ಥಿತಿ ಇದೀಗ ಉತ್ತಮವಾಗಿದೆ" ಎಂದು ಮೂಲಗಳು ಹೇಳಿವೆ.
ಕಳೆದ ಜುಲೈನಲ್ಲಿ ಗಲ್ಫ್ ಇಂಡಿಯಾ ವಿಮಾನದ ಕಾಕ್‌ಪಿಟ್‌ನಲ್ಲಿ ಜೀವಂತ ಪುಟ್ಟ ಹಕ್ಕಿ ಪತ್ತೆಯಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಕಲ್ಲಿಕೋಟೆಯಿಂದ ದುಬೈಗೆ ಹೋಗುತ್ತಿದ್ದ ಸರಕು ಸಾಗಾಣಿಕೆ ವಿಮಾನದಲ್ಲಿ ಹಾವು ಪತ್ತೆಯಾಗಿತ್ತು. ವಿಮಾನದಲ್ಲಿ ಇಲಿಗಳು ಕಂಡುಬರುವ ನಿದರ್ಶನಗಳು ಸಾಮಾನ್ಯ.





