ನಡೆದರಷ್ಟೇ ಮೂಡುವುದು ಹೊಸ ದಾರಿ
ಭಾಗ - 1

ಇಂದು ಪ್ರಜಾಪ್ರಭುತ್ವದ ಜೀವಂತಿಕೆಯನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ಚುನಾವಣಾ ಫಲಿತಾಂಶದ ಆಧಾರದಲ್ಲಿ ಆ ಮೂಲಕ ಸಂಸದರ, ಶಾಸಕರ ಸಂಖ್ಯಾಬಲದ ಆಧಾರದ ಮೇಲೆ, ಬಹುಮತದ ಮೇಲೆ ನಿರ್ಧರಿಸಲಾಗುತ್ತಿದೆ. ದಶಕಗಳ ಕಾಲ ಕಾಂಗ್ರೆಸ್ನ ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿಯೇ ಗೆಟ್ಟೋಗಳಲ್ಲಿ ನರಳಬೇಕಾದ ಸ್ಥಿತಿಯಲ್ಲಿರುವ ಮುಸ್ಲಿಮ್ ಸಮುದಾಯವು ಆಗ ಕನಿಷ್ಠ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಇಂದು ಸಂಘ ಪರಿವಾರದ ಹಿಂಸಾತ್ಮಕ ಹಿಂದುತ್ವದ ಹೆಸರಿನ ಆಕ್ರಮಣದಲ್ಲಿ ಆ ತುಷ್ಟೀಕರಣದ ರಾಜಕಾರಣವೂ ಮುಗಿದ ಅಧ್ಯಾಯವಾಗಿದೆ ಮತ್ತು ಮುಸ್ಲಿಮರ ಅಸ್ತಿತ್ವವೇ ಇಂದು ಪ್ರಶ್ನಾರ್ಹವಾಗುತ್ತಿದೆ.
ಎಲ್ಲವೂ ಆಗಿ ಹೋಗಿದೆ, ಮತ್ತು ಎಲ್ಲವೂ ಉಳಿದಿದೆ
ಆದರೆ ನಾವು ಮುನ್ನುಗ್ಗುವುದೇ ನಮ್ಮ ಕಾರ್ಯಭಾರ
ರಸ್ತೆಗಳನ್ನು ನಿರ್ಮಿಸುತ್ತಾ ಸಾಗುವುದು
ಸಮುದ್ರವನ್ನು ಸೀಳಿಕೊಂಡ ರಸ್ತೆಗಳು
ಪಯಣಿಗನೆ, ನಿನ್ನ ಹೆಜ್ಜೆ ಗುರುತುಗಳೇ ರಸ್ತೆ
ಮತ್ತೇನಿಲ್ಲ
ಪಯಣಿಗನೇ ಅಲ್ಲಿ ರಸ್ತೆಯೇ ಇಲ್ಲ
ನಡೆದರಷ್ಟೇ ಮೂಡುವುದು ಹೊಸ ದಾರಿ
ನಮ್ಮ ನಡೆಯೇ ರಸ್ತೆ
- ಅಂಟೋನಿಯೋ ಮಕಾಡೋ
ನಮ್ಮ ವರ್ತಮಾನದ ಪರಿಸ್ಥಿತಿ ಎಷ್ಟು ಕ್ರೌರ್ಯದಿಂದ ತುಂಬಿಕೊಂಡಿದೆಯೆಂದರೆ ಪ್ರಸಕ್ತ ಸಂದರ್ಭದಲ್ಲಿ ಇಲ್ಲಿನ ಸಮಾಜ, ಸಂಸ್ಕೃತಿ ಕಂಡರಿಯದಷ್ಟು ಸಂಕೀರ್ಣವಾಗಿದೆ, ಜಟಿಲವಾಗಿದೆ, ವಿಕೃತಗೊಂಡಿದೆ. ಮುಂದಿನ ಹೆಜ್ಜೆ ಇಲ್ಲವೇನೋ ಎನ್ನುವ ಆತಂಕ ಕಾಡುತ್ತಿದೆ. ಇಲ್ಲಿ ಪರಸ್ಪರ ಮಾತುಕತೆ, ಸೌಹಾರ್ದದ ಬದುಕು ಸಾಧ್ಯವಿಲ್ಲ ಎನ್ನುವ ವಿಷಮ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಸಂಘ ಪರಿವಾರ ಕೇಂದ್ರದಲ್ಲಿ ಮೋದಿ ನಾಯಕತ್ವದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಆರೆಸ್ಸೆಸ್ ನ ಹಿಡನ್ ಅಜೆಂಡಾಗಳೆಲ್ಲಾ ಇಂದು ಬಹಿರಂಗ ಸಿದ್ಧಾಂತಗಳಾಗಿ ಶಿಕ್ಷಣವನ್ನು ಒಳಗೊಂಡಂತೆ ಆಡಳಿತದ ಎಲ್ಲಾ ಹಂತಗಳಲ್ಲಿ ವ್ಯಾಪಿಸಿಕೊಳ್ಳುತ್ತಿದೆ. ಪ್ರತಿಯೊಂದು ಧರ್ಮದ ಜನರು ಬಹುಬೇಗ ಪರಸ್ಪರ ವಿಶ್ವಾಸ, ಸಹನೆ, ಸಂಯಮ, ವಿವೇಚನೆಗಳನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹಿಂದುತ್ವದ ಮುಖವಾಡ ಧರಿಸಿದ ಚಾತುರ್ವರ್ಣ ಸಿದ್ಧಾಂತದ ಅಸಹನೆ, ಹಿಂಸೆ, ಪಶು ಪ್ರವೃತ್ತಿಗೆ ಮೊದಲ ಬಲಿಯಾಗುತ್ತಿರುವುದು ದಲಿತ-ಮುಸ್ಲಿಮ್ ಸಮುದಾಯ.
ಸಂಘಿಗಳ ಬಹುಸಂಖ್ಯಾತವಾದದ ಫ್ಯಾಶಿಸಂನ ಫಲವಾಗಿ ಇಂದು ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮ್ ಸಮುದಾಯದ ಮೇಲೆ ಸದಾ ಹಿಂಸಾತ್ಮಕ ಹಲ್ಲೆ, ದೌರ್ಜನ್ಯ, ಕೊಲೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ಒಂಭತ್ತು ವರ್ಷಗಳಲ್ಲಿ ಪುರಾವೆಯಾಗಿ ನೂರಾರು ಉದಾಹರಣೆಗಳನ್ನು ಕೊಡಬಹುದು.
ಸಂವಿಧಾನ ಸಮರ್ಪಣೆಯ ಸಂದರ್ಭದಲ್ಲಿಯೇ ಅಂಬೇಡ್ಕರ್ ಅವರು ‘‘ಒಬ್ಬ ವ್ಯಕ್ತಿ, ಒಂದು ವೋಟು, ಒಂದು ಮೌಲ್ಯ’’ ಎಂದು ಹೇಳಿದ್ದರು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮತ ಚಲಾಯಿಸುವ ಹಕ್ಕಿರುತ್ತದೆ, ಅದು ಮೌಲ್ಯಯುತವಾಗಿರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದ ಮಾತುಗಳು ಇಂದಿಗೂ ಪ್ರಸ್ತುತ ಮತ್ತು ತುಂಬಾ ವಾಸ್ತವ. ಏಕೆಂದರೆ ದಲಿತರ, ತಳ ಸಮುದಾಯಗಳ ಸಹಕಾರವಿಲ್ಲದೆ ಇಂದು ಯಾವುದೇ ರಾಜಕೀಯ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ.
ದಲಿತ ಸಮುದಾಯಕ್ಕೆ ಉಳಿದುಕೊಂಡಿರುವ ವೋಟಿನ ಮೌಲ್ಯವು ಅವರ ಪರವಾಗಿ ಕಟ್ಟ ಕಡೆಯ ಗುರಾಣಿಯಂತೆ ಬಳಕೆಯಾಗುತ್ತಿದೆ. ಆದರೆ ಮುಸ್ಲಿಮ್ ಸಮುದಾಯಕ್ಕೆ ಈ ಅದೃಷ್ಟವಿಲ್ಲ. ಮುಸ್ಲಿಮರ ಮತಗಳ ಅವಶ್ಯಕತೆಯೇ ಇಲ್ಲದೆ ಬಿಜೆಪಿ ಸರಕಾರವು 2014 ಮತ್ತು 2019ರ ಕೇಂದ್ರ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿತು ಮತ್ತು ಮುಸ್ಲಿಮ್ ಮತಗಳ ಬೆಂಬಲವಿಲ್ಲದೆಯೇ 2017 ಮತ್ತು 2022ರ ಉ.ಪ್ರ. ಚುನಾವಣೆಯಲ್ಲಿ ದೈತ್ಯ ಬಹುಮತ ಪಡೆಯಿತು. ಬಿಜೆಪಿಯಿಂದ ಒಬ್ಬ ಮುಸ್ಲಿಮ್ ಸಂಸದನಿಲ್ಲ (ಮುಸ್ಲಿಮ್ ಅಭ್ಯರ್ಥಿಯನ್ನು ಕಣಕ್ಕೇ ಇಳಿಸಿರಲಿಲ್ಲ), ಉ.ಪ್ರ. ವಿಧಾನಸಭೆಯ 315 ಬಿಜೆಪಿ ಶಾಸಕರಲ್ಲಿ ಒಬ್ಬ ಮುಸ್ಲಿಮ್ ಶಾಸಕನಿಲ್ಲ (ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ಕೊಟ್ಟಿರಲಿಲ್ಲ).
ಇಂದು ಪ್ರಜಾಪ್ರಭುತ್ವದ ಜೀವಂತಿಕೆಯನ್ನು, ಸಂಸದೀಯ ಪ್ರಜಾಪ್ರಭುತ್ವವನ್ನು ಚುನಾವಣಾ ಫಲಿತಾಂಶದ ಆಧಾರದಲ್ಲಿ ಆ ಮೂಲಕ ಸಂಸದರ, ಶಾಸಕರ ಸಂಖ್ಯಾಬಲದ ಆಧಾರದ ಮೇಲೆ, ಬಹುಮತದ ಮೇಲೆ ನಿರ್ಧರಿಸಲಾಗುತ್ತಿದೆ. ದಶಕಗಳ ಕಾಲ ಕಾಂಗ್ರೆಸ್ ನ ಕೇವಲ ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿಯೇ ಗೆಟ್ಟೋಗಳಲ್ಲಿ ನರಳಬೇಕಾದ ಸ್ಥಿತಿಯಲ್ಲಿರುವ ಮುಸ್ಲಿಮ್ ಸಮುದಾಯವು ಆಗ ಕನಿಷ್ಠ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಇಂದು ಸಂಘ ಪರಿವಾರದ ಹಿಂಸಾತ್ಮಕ ಹಿಂದುತ್ವದ ಹೆಸರಿನ ಆಕ್ರಮಣದಲ್ಲಿ ಆ ತುಷ್ಟೀಕರಣದ ರಾಜಕಾರಣವೂ ಮುಗಿದ ಅಧ್ಯಾಯವಾಗಿದೆ ಮತ್ತು ಮುಸ್ಲಿಮರ ಅಸ್ತಿತ್ವವೇ ಇಂದು ಪ್ರಶ್ನಾರ್ಹವಾಗುತ್ತಿದೆ.
ಇದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿಜೆಪಿಯ ಬಸವರಾಜ ಬೊಮ್ಮಾಯಿಯವರು ದಿಢೀರನೆ ಮುಸ್ಲಿಮರಿಗಿದ್ದ 2ಬಿ ಮೀಸಲಾತಿಯನ್ನು ರದ್ದುಪಡಿಸಿದರು ಮತ್ತು ಆ ಶೇ.4 ಪ್ರಮಾಣವನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಿದರು. ತಮ್ಮ ಹಿತಾಸಕ್ತಿಗಾಗಿ ಮುಸ್ಲಿಮರ ವಿರುದ್ಧ ಲಿಂಗಾಯತರು ಹಾಗೂ ಒಕ್ಕಲಿಗರನ್ನು ಎತ್ತಿಕಟ್ಟುವ, ಒಡೆದು ಆಳುವ ನೀತಿಯನ್ನು ಪ್ರಯೋಗಿಸಿದರು.
ಈ ಮೂಲಕ ಲಿಂಗಾಯತರು ಹಾಗೂ ಒಕ್ಕಲಿಗರ ಮತಗಳು ತಮಗೆ ಹರಿದು ಬರುತ್ತವೆ ಎಂದು ಸಂಘಿಗಳು ನಂಬಿದ್ದಾರೆ. ಈಗಾಗಲೇ ಮುಸ್ಲಿಮರ ವಿರುದ್ಧ ಪೂರ್ವಗ್ರಹಪೀಡಿತರಾಗಿರುವ ಬಹುಸಂಖ್ಯಾತ ಧರ್ಮದ ಹಿಂದೂಗಳನ್ನು ಮತ್ತಷ್ಟು ಪ್ರಚೋದಿಸುವ ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಚುನಾವಣಾ ಭಾಷಣಗಳಲ್ಲಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ ‘‘ಧರ್ಮ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿದ್ದೇವೆ, ನಾವು ತೆಲಂಗಾಣದಲ್ಲಿ ಮುಸ್ಲಿಮರ ಮೀಸಲಾತಿ ರದ್ದು ಮಾಡುತ್ತೇವೆ’’ ಎಂದು ಪ್ರಚೋದನಾತ್ಮಕ ಹೇಳಿಕೆ ಕೊಡುತ್ತಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಅಮಿತ್ ಶಾ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಅಲ್ಲ, ಬದಲಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಮೀಸಲಾತಿ ಕೊಡಲಾಗಿದೆ ಎನ್ನುವ ಸತ್ಯವನ್ನು ಮರೆಮಾಚಿ ಸುಳ್ಳುಗಳನ್ನು ಪ್ರಚಾರ ಮಾಡುತ್ತಿರುವುದು ಪ್ರಜಾಪ್ರಭುತ್ವದ ಅವನತಿ ಎಂದೇ ಕರೆಯಬೇಕು. ಇದಕ್ಕೂ ಮುಂಚೆ ಹಿಜಾಬ್ ವಿವಾದ ಸೃಷ್ಟಿಸಿ ಮುಸ್ಲಿಮ್ ಸಮುದಾಯದ ಆತ್ಮಸ್ಥೈರ್ಯವನ್ನು ಕುಗ್ಗಿಸಿದರು.
1994ರಲ್ಲಿ ಚಿನ್ನಪ್ಪರೆಡ್ಡಿ ಆಯೋಗದ ಶಿಫಾರಸಿನ ಮೂಲಕ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು. ಪ್ರೊ. ಮುಝಫ್ಫರ್ ಅಸ್ಸಾದಿಯವರು ‘‘ಇಸ್ಲಾಮ್ ಎನ್ನುವುದು ಮತಧರ್ಮ, ಅದನ್ನು ಪಾಲಿಸುವ ಮುಸ್ಲಿಮ್ ಒಂದು ಸಮುದಾಯ. ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸಲು ವಿಫಲವಾಗಿರುವ ಬಿಜೆಪಿ ಸರಕಾರವು ಮುಸ್ಲಿಮರನ್ನು ಧಾರ್ಮಿಕ ಗುಂಪು ಎಂದು ಪರಿಗಣಿಸಿದ್ದು ಒಂದು ಅಸಂಬದ್ಧ’’ ಎಂದು ವಿವರಿಸುತ್ತಾರೆ.
ಆದರೆ ಬೊಮ್ಮಾಯಿಯವರು ಯಾವ ಸಂಶೋಧನೆ, ಅಧ್ಯಯನದ ಆಧಾರದಲ್ಲಿ ಮುಸ್ಲಿಮರನ್ನು 2ಬಿ ಪಟ್ಟಿಯಿಂದ ಕೈಬಿಟ್ಟರು? ಇವರ ಮುಂದೆ ಯಾವ ಮಾನದಂಡಗಳಿದ್ದವು? ಮುಸ್ಲಿಮರಿಗೆ ಧರ್ಮ ಆಧರಿಸಿ ಮೀಸಲಾತಿ ಕಲ್ಪಿಸಿಲ್ಲ ಎನ್ನುವ ಕಾನೂನಾತ್ಮಕ ಸತ್ಯವನ್ನು ಸಹ ಬಿಜೆಪಿ ಸರಕಾರ ಮುಚ್ಚಿಟ್ಟಿದೆ? ಆದರೆ ಕ್ರಿಶ್ಚಿಯನ್ರಿಗೆ, ಜೈನ್ರಲ್ಲಿ ನಿರ್ದಿಷ್ಟ ಉಪಜಾತಿಗೆ ಧರ್ಮದ ಆಧಾರದಲ್ಲಿ ಪ್ರವರ್ಗ 3ಬಿ ಅಡಿಯಲ್ಲಿ ಮೀಸಲಾತಿ ಕೊಟ್ಟಿಲ್ಲವೇ? ಬಿಜೆಪಿ ಸರಕಾರವು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆದರೆ ಕಾನೂನು ತಜ್ಞರು ಈ ಮಧ್ಯಂತರ ವರದಿಯಲ್ಲಿ ಮುಸ್ಲಿಮ ರನ್ನು 2ಬಿಯಿಂದ ಕೈಬಿಡಬೇಕೆಂದು ಎಲ್ಲಿಯೂ ಪ್ರಸ್ತಾಪಿಸಿಲ್ಲ ಮತ್ತು ಅಂತಿಮ ವರದಿ ಪ್ರಕಟವಾಗುವವರೆಗೂ ಮೀಸಲಾತಿ ಮ್ಯಾಟ್ರಿಕ್ಸ್ನಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲವೆಂದು ಹೇಳಿದ್ದಾರೆ ಎಂದು ಅಭಿಪ್ರಾಯಪಡುತ್ತಾರೆ.
ಇಂತಹ ಬಹುಮುಖ್ಯ ಪ್ರಶ್ನೆಗಳನ್ನು ಸಿದ್ದರಾಮಯ್ಯರಂತಹ ಹಿರಿಯ ರಾಜಕಾರಣಿಗಳನ್ನು ಹೊರತುಪಡಿಸಿ ಇತರ ವಿರೋಧ ಪಕ್ಷದವರೂ ಕೇಳುತ್ತಿಲ್ಲ, ಮಾಧ್ಯಮಗಳೂ ಮಾತನಾಡುತ್ತಿಲ್ಲ. ಈ ನಿರ್ಧಾರವನ್ನು ವಿರೋಧಿಸಿ ಮುಸ್ಲಿಮ್ ಸಂಘಟನೆಗಳು ಬಹಿರಂಗವಾಗಿ ಪ್ರತಿಭಟಿಸುತ್ತಾರೆ. ಆಗ ಅದಕ್ಕೆ ಕೋಮು ಗಲಭೆಯನ್ನು ಸೃಷ್ಟಿಸಿ ವೋಟಿನ ಫಸಲು ತೆಗೆಯಬಹುದು ಎಂದು ಸಹ ಬಿಜೆಪಿ ಲೆಕ್ಕಾಚಾರ ಹಾಕಿತ್ತು. ಆದರೆ ಮುಸ್ಲಿಮ್ ಸಂಘಟನೆಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಸದ್ಯಕ್ಕೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಕೆ.ಎಂ. ಜೋಸೆಫ್ರ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ.
ಒಂದು ದೇಶವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನುವುದರ ಮೇಲೆ ಆ ದೇಶವನ್ನು ಅರಿತುಕೊಳ್ಳಬಹುದು ಎಂದು ವಿವರಿಸಿದ ಗಾಂಧಿಯವರ ಆಶಯವನ್ನು ಸಂಪೂರ್ಣ ಧ್ವಂಸಗೊಳಿಸಿರುವ ಸಂಘ ಪರಿವಾರ ಮತ್ತು ಇಲ್ಲಿನ ಹಿಂದುತ್ವದ ರಾಜಕಾರಣದ ಫಲವಾಗಿ ಭಾರತದ ಅಲ್ಪಸಂಖ್ಯಾತರಾದ ಮುಸ್ಲಿಮ್ ಸಮುದಾಯವು ಇಂದು ಅನುಮಾನಿತರು ಮತ್ತು ಅವಮಾನಿತರಾಗಿ ಬದುಕುತ್ತಿದ್ದಾರೆ.
ಈ ಆರೆಸ್ಸೆಸ್ ನ ಬ್ರಾಹ್ಮಣಶಾಹಿ ಯಜಮಾನಿಕೆಯ ಹಿಂಸಾತ್ಮಕ ರಾಜಕಾರಣದಲ್ಲಿ ಮತ್ತು ಬಹುಸಂಖ್ಯಾತವಾದದ ಬೆಂಬಲಿತ ನಾಗರಿಕರ ಅಸಹನೆ ಮತ್ತು ಕ್ರೌರ್ಯದಲ್ಲಿ ಮುಸ್ಲಿಮ್ ಸಮುದಾಯ ಸಂಪೂರ್ಣವಾಗಿ ನಲುಗಿ ಹೋಗಿದೆ. ಘನತೆಯನ್ನೇ ಕಳೆದುಕೊಂಡು ಅನುಮಾನಿತರು ಮತ್ತು ಅವಮಾನಿತರಾಗಿ ಜೀವಿಸಬೇಕಾದಂತಹ ದುರಂತ ಪರಿಸ್ಥಿತಿಯಲ್ಲಿ ಇಂದು ಮುಸ್ಲಿಮ್ ಸಮುದಾಯ ಬದುಕುತ್ತಿದೆ.
►ಮುಸ್ಲಿಮರು ಹಿಂದುಳಿದವರು
ಇಂಡಿಯಾದಲ್ಲಿ ಮುಸ್ಲಿಮ್ ಸಮುದಾಯದ ಐಡೆಂಟಿಟಿ ಪ್ರಶ್ನೆಗಳನ್ನು ಎತ್ತಿಕೊಂಡು ಆ ಮೂಲಕ ಬಹು ಸಂಸ್ಕೃತಿ, ಪ್ರಜಾಪ್ರಭುತ್ವ ಮತ್ತು ಜಾಗತಿಕ ಪ್ರಜಾಪ್ರಭುತ್ವದೊಂದಿಗೆ ಇಂಡಿಯಾದ ಹೋಲಿಕೆಗಳಂತಹ ಮುಖ್ಯ ಸಂಗತಿಗಳನ್ನು ಜೋಯಾ ಹಸನ್, ಅನ್ವರ್ ಆಲಮ್, ಬಾಜಪೇಯಿ, ಬಸರೂರು, ಮಹಾಜನ್ ಮತ್ತು ಜೋಡ್ಕ, ವೋರ ಮತ್ತು ಪಲ್ಶೀಕರ್ರಂತಹ ಸಂಶೋಧಕರು, ಚಿಂತಕರು ಎಣೆಯಿಲ್ಲದಷ್ಟು ಅಧ್ಯಯನ ಮಾಡಿದ್ದಾರೆ, ಬರೆದಿದ್ದಾರೆ.
2006ರಲ್ಲಿ ಸಾರ್ವಜನಿಕವಾಗಿ ಮಂಡಿತವಾದ ಸಾಚಾರ್ ಕಮಿಟಿ (ಇಂಡಿಯಾದಲ್ಲಿ ಮುಸ್ಲಿಮ್ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನದ ಕುರಿತು ಪ್ರಧಾನಮಂತ್ರಿಗಳ ಉನ್ನತ ಮಟ್ಟದ ಕಮಿಟಿ), 2006ರಲ್ಲಿ ಮಂಡಿತವಾದ ರಂಗನಾಥ್ ಮಿಶ್ರಾ ಕಮಿಟಿ (ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಕಮಿಟಿಯ ವರದಿ) ಎನ್ನುವ ಎರಡು ವರದಿಗಳು ಸ್ವಾತಂತ್ರ್ಯಾನಂತರ ಮುಸ್ಲಿಮ್ ಸಮುದಾಯದ ಮತ್ತು ಇತರ ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅತ್ಯಂತ ವೈಜ್ಞಾನಿಕ, ಅಥೆಂಟಿಕ್ ಆದ ಅಧಿಕೃತ ಸಂಶೋಧನೆಗಳು ಎಂದೇ ಪರಿಗಣಿಸಲ್ಪಡುತ್ತದೆ.
ಮುಸ್ಲಿಮ್ ಸಮುದಾಯವು ತಾರತಮ್ಯ ನೀತಿ, ಪ್ರತ್ಯೇಕತೆಯ ತತ್ವಗಳಿಗೆ ಬಲಿಯಾಗಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವೆಂದು ಈ ಕಮಿಟಿಗಳ ಸಂಶೋಧನೆಯು ವಿವರಿಸುತ್ತದೆ







