ಮಲ್ಲಿಕಾರ್ಜುನ ಖರ್ಗೆ, ಹೆಂಡತಿ ಮಕ್ಕಳ ಹತ್ಯೆಗೆ ಬಿಜೆಪಿ ಸಂಚು: ರಣದೀಪ್ ಸಿಂಗ್ ಸುರ್ಜೇವಾಲಾ ಗಂಭೀರ ಆರೋಪ
''ಚಿತ್ತಾಪುರ ಬಿಜೆಪಿ ಅಭ್ಯರ್ಥಿಯ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ''

ಬೆಂಗಳೂರು: ಬಿಜೆಪಿ ತನ್ನ ದ್ವೇಷದ ಮೂಲಕ ಕರ್ನಾಟಕದ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿ ಪಾಪದ ಕೃತ್ಯ ಎಸಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಸುರ್ಜೇವಾಲಾ, ''ಹತ್ಯೆಗೆ ಸಂಚು ನಡೆದಿದ್ದರೂ ಮೋದಿ ಹಾಗೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಸೇರಿದಂತೆ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಸಂಚು ರೂಪಿಸಿದೆ'' ಎಂದು ದೂರಿದ್ದಾರೆ.
'ಮೋದಿ ಹಾಗೂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ' ಎಂದು ಮಾಹಿತಿ ನೀಡಿದರು.
'ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ಕನ್ನಡ ನಾಡಿನ ಮಗ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ದ್ವೇಷ ಕಾರುತ್ತಲೆ ಬಂದಿದೆ. ಖರ್ಗೆ ಅವರು ದಲಿತ ಹಾಗೂ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಖರ್ಗೆ ಅವರ ವಿರುದ್ಧ ಸಂಚು ರೂಪಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆ.27, 2023ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಛತ್ರಿ ಕೆಳಗೆ ನಿಂತಿಲ್ಲ ಎಂದು ಹೇಳುವ ಮೂಲಕ ಲೇವಡಿ ಮಾಡಿದ್ದರು. ಬಿಜೆಪಿಯ ದ್ವೇಷಪೂರಿತ ಹೇಳಿಕೆ ಅಲ್ಲಿಗೆ ನಿಲ್ಲಲಿಲ್ಲ. ಮೇ 02, 2023ರಂದು ಬಿಜೆಪಿ ರಾಜಸ್ಥಾನದ ಶಾಸಕ ಹಾಗೂ ಪ್ರಧಾನ ಕಾರ್ಯದರ್ಶಿ ಮದನ್ ದಿಲಾವರ್ ಖರ್ಗೆ ಅವರಿಗೆ 80 ವರ್ಷ ವಯಸ್ಸಾಗಿದ್ದು, ದೇವರು ಅವರನ್ನು ಯಾವಾಗ ಬೇಕಾದರೂ ಕರೆಸಿಕೊಳ್ಳಬಹುದು ಎಂದು ಖರ್ಗೆ ಅವರ ಸಾವನ್ನು ಬಯಸಿದ್ದರು. ಈಗ ಬಿಜೆಪಿ ನಾಯಕರು ಬಹಿರಂಗವಾಗಿ ಖರ್ಗೆ ಹಾಗೂ ಅವರ ಕುಟುಂಬದ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆ ಸೋಲುವ ಹತಾಷೆಯಲ್ಲಿ ಬಿಜೆಪಿ ಹಾಗೂ ಅದರ ನಾಯಕರು ಅತ್ಯಂತ ಭಯಾನಕ ಹಂತಕ್ಕೆ ತಲುಪಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ರೂಪಿಸಿರುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡದೆ, ತಮ್ಮ 40% ಕಮಿಷನ್ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪ್ರತಿನಿತ್ಯ ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡಿ ಸಮಾಜ ಒಡೆಯುವ ಪ್ರಯತ್ನಕ್ಕೆ ಮುಂದಾಗಿದೆ. ಈ ಕುತಂತ್ರದಲ್ಲೂ ಯಶಸ್ಸು ಕಾಣದೆ ಕುಸಿಯುತ್ತಿರುವ ಬಿಜೆಪಿ ಈಗ ತಮ್ಮ ಬತ್ತಳಿಕೆಯಿಂದ ಹತ್ಯೆ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ.
ಬಸವಣ್ಣನ ನಾಡು ಸಾಮರಸ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ನಾಡಿನ ಈ ಪರಂಪರೆಯ ಮೇಲೆ ಈಗ ದಾಳಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಖರ್ಗೆ ಅವರ ಮೇಲೆ ದಾಳಿಯ ಸಂಚು ಮಾತ್ರವಲ್ಲ, ಕನ್ನಡಿಗರ ಮೇಲೆ ದಾಳಿ ಮಾಡುವ ಸಂಚು. ಇಷ್ಟೆಲ್ಲಾ ಆದರೂ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಮೌನಕ್ಕೆ ಶರಣಾಗಿದೆ. ಆದರೆ ರಾಜ್ಯದ 6.50 ಕೋಟಿ ಕನ್ನಡಿಗರು ಈ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಸುರ್ಜೇವಾಲಾ ಎಚ್ಚರಿಸಿದ್ದಾರೆ.
Sinister & Ugly Plot to Kill AICC President Shri Mallikarjun Kharge and Family by the BJP leaders unearthed!
— Randeep Singh Surjewala (@rssurjewala) May 6, 2023
Brazen Hatred of BJP towards Kannadigas is Manifesting itself into a “Murder Plot” to kill Karnataka’s Son of the Soil, Shri Kharge.
PM & BJP Leadership remain “Mute” as… pic.twitter.com/jJfkaRlRby