ರೋಡ್ ಶೋ ಬೇಕಾದರೆ 1 ದಿನ ಮುಂದೂಡಬಹುದು, ನೀಟ್ ಪರೀಕ್ಷೆ ಮುಂದೂಡಲು ಸಾಧ್ಯವೇ?: ಸಿದ್ದರಾಮಯ್ಯ ಆಕ್ರೋಶ
''ಮೋದಿ ರಾಜ್ಯಕ್ಕೆ ಪದೇ ಪದೇ ಬರುವುದರಿಂದ ಅನುಕೂಲಕ್ಕಿಂತ ಅನಾನೂಕೂಲವೇ ಹೆಚ್ಚು''

ಮೈಸೂರು: ನೀಟ್ ಪರೀಕ್ಷೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರೋಡ್ ಶೋ ಅತ್ಯಂತ ಖಂಡನೀಯ, ವಿದ್ಯಾರ್ಥಿಗಳಿಗೆ ಆಗುವ ತೊಂದರೆಗೆ ಯಾರು ಹೊಣೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳ ರೋಡ್ ಶೋ ಬೇಕಾದರೆ ಒಂದು ದಿನ ಮುಂದೂಡಬಹುದು. ನೀಟ್ ಪರೀಕ್ಷೆ ಮುಂದೂಡಲು ಸಾಧ್ಯವೆ? ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟು ರಸ್ತೆಗಳನ್ನೆಲ್ಲಾ ಬಂದ್ ಮಾಡಿ ಅನಾನೂಕೂಲ ಉಂಟುಮಾಡುವುದು ಖಂಡನೀಯ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನೀಟ್ ಪತಿಕ್ಷಾರ್ಥಿಗಳು ಒಂದು ದಿನ ಮುಂಚೆಯೇ ಬಂದು ಪರೀಕ್ಷೆ ಹಾಲ್ ನಲ್ಲಿ ಉಳಿದುಕೊಳ್ಳಲಿ ಎಂದು ಹೇಳಿರುವುದು ಅವರ ಮನಸ್ಥಿತಿ ಎಂತಹುದು ಎಂಬುದನ್ಮು ತೋರಿಸುತ್ತದೆ. ವಿದ್ಯಾರ್ಥಗಳ ಭವಿಷ್ಯದ ಜೊತೆ ಯಾರೂ ಚೆಲ್ಲಾಟವಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಒಬ್ಬ ಪ್ರಧಾನಮಂತ್ರಿ ರಾಜ್ಯಕ್ಕೆ ಪದೇ ಪದೇ ಬರುವುದರಿಂದ ಅನುಕೂಲಕ್ಕಿಂತ ಅನಾನೂಕೂಲವೇ ಹೆಚ್ಚು, ಇದು ರಾಜ್ಯದ ಚುನಾವಣೆ ದೇಶದ ಚುನಾವಣೆಯಲ್ಲ. ಹಾಗಾಗಿ ದೇಶದ ಪ್ರಧಾನಮಂತ್ರಿ ರಾಜ್ಯಕ್ಕೆ ಬರುವುದರಿಂದ ಸಾಮಾನ್ಯ ಜನರಿಗೆ ತೊಂದರೆತಾಗಲಿದೆ. ಇದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅರ್ಥಮಾಡಿಕೊಳ್ಳಬೇಕು ಎಂದು ಕುಟುಕಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಎಲ್ಲಿ ಬಂದಾದರೂ ಪ್ರಚಾರ ಮಾಡಬಹುದು. ಇದಕ್ಕೆ ನಮ್ಮ ಅಭ್ಯಂತರವೇನು ಇಲ್ಲ. ಆದರೆ ಭದ್ರತೆ ದೃಷ್ಟಿಯಿಂದ ಜನರಿಗೆ ಆಗುವ ಅನಾನೂಕೂಲನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ನನ್ನ ಪ್ರಚಾರಕ್ಕೆ ಅನುಮತಿ ನೀಡಲಿಲ್ಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಹೊಸಪೇಟೆಗೆ ಹೋಗುತ್ತಿದ್ದರು. ನಾನು ಚುನಾವಣಾ ಪ್ರಚಾರಕ್ಕಾಗಿ ಗಂಗಾವತಿಗೆ ಹೋಗಬೇಕಿತ್ತು. ಆದರೆ ನನಗೆ ಅಲ್ಲಿಗೆ ಹೋಗಲು ಅನುಮತಿಯನ್ನೇ ನೀಡಲಿಲ್ಲ, ನಾನು ಎಷ್ಟೆ ಪರಿಪರಿಯಾಗಿ ವಿನಂತಿಸಿಕೊಂಡರು ನನ್ನ ಪ್ರಚಾರಕ್ಕೆ ಅವಕಾಶ ನೀಡಲಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖ್ಯಸ್ಥನಿಗೆ ಈ ರೀತಿ ತೊಂದರೆಯಾದ ಮೇಲೆ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲವೆ ಎಂದು ಪ್ರಶ್ನಿಸಿದರು.
ಬಿಜೆಪಿಯ ರಾಜ್ಯ ನಾಯಕರುಗಳು ರಾಜ್ಯದ ಜನರಲ್ಲಿ ಮತ ಕೇಳುವ ನೈತಿಕತೆಯನ್ನು ಕಳೆದಯಕೊಂಡಿದ್ದಾರೆ. ಹಾಗಾಗಿ ಪದೇ ಪದೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ರಾಜ್ಯಕ್ಕೆ ಕರೆದುಕೊಂಡು ಬಂದು ಕ್ಯಾಂಪೇನ್ ಮಾಡಿಸುತ್ತಿದ್ದಾರೆ. ಇವರು ರಾಜ್ಯಕ್ಕೆ ಬಂದು ಇಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡದೆ ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇವರು ಎಷ್ಟೇ ಬಾರಿ ರಾಜ್ಯಕ್ಕೆ ಬಂದು ಕ್ಯಾಂಪೇನ್ ಮಾಡಿದರೂ ನಮಗೆ ತೊಂದರೆ ಇಲ್ಲ, ಈ ಬಾರಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರುಣಾ ಕ್ಷೇತ್ರದ ಜನ ಎಂದೂ ಜಾತಿವಾದಿಗಳಲ್ಲ, ಆದರೆ ಬಿಜೆಪಿಯವರು ಜಾತಿ ಜಾತಿಗಳ ಮಧ್ಯೆ ವಿಷ ಹಾಕಿ ಅಪಪ್ರಚಾರ ಮಾಡಲು ಹೊರಟಿದ್ದಾರೆ. ಬಿಜೆಪಿಯವರ ಷಡ್ಯಂತ್ರಕ್ಕೆ ವರುಣಾ ಜನರು ಮೆಟ್ಟಿ ನಿಂತು ನನಗೆ ಆಶೀರ್ವಾದ ಮಾಡಿ ದೊಡ್ಡ ಮಟ್ಟದ ಅಂತರದಿಂದ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಜನ ಬಿಜೆಪಿ ಆಡಳಿತದ ಭ್ರಷ್ಟಾಚಾರದಿಂದ ಬೇಸತ್ತಿದ್ದಾರೆ. ರಾಜ್ಯದಲ್ಲಿ ಹಿಜಾಬ್, ಹಲಾಲ್, ಅಝಾನ್ ನಂತಹ ಅನಗತ್ಯ ವಿಚಾರಗಳನ್ನು ಎಳೆದು ತಂದು ಗೊಂದಲ ಸೃಷ್ಟಿ ಮಾಡಿದ್ದಾರೆ.ಅಲ್ಪಸಂಖ್ಯಾತರು ಆತಂಕದಲ್ಲಿ ಬದುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಜನ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಮುಂದಾಗಿದ್ದಾರೆ ಎಂದರು.
ರಾಜ್ಯದಲ್ಲಿ ಸ್ಪಷ್ಟಬಹುಮತದ ಸರ್ಕಾರ ತರಬೇಕು ಎಂದು ಜನ ಬಯಸಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಸೀಟ್ ಗಳನ್ನು ನೀಡುವ ಮೂಲಕ ಸುಭದ್ರ ಸರ್ಕಾರ ನಡೆಸಲು ಅವಕಾಶ ಮಾಡಿಕೊಡಲಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅವಕಾಶ ಮಾಡಿ ಎಂದು ನಾನು ಮತ್ತೊಮ್ಮೆ ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನಕಾರ್ಯದರ್ಶಿ ಸುಬ್ರಮಣ್ಯ, ನಗರ ಉಪಾಧ್ಯಕ್ಷ ಬಸವಣ್ಣ, ನಗರ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಚಿ ನಾಗೇಶ್ ಪಾಣತ್ತಲೆ ಉಪಸ್ಥಿತರಿದ್ದರು.







