ದ.ಕ. ಜಿಲ್ಲೆ: ಮನೆಯಿಂದಲೇ ಮತದಾನ ಪ್ರಕ್ರಿಯೆ ಪೂರ್ಣ; 15,354 ಮತದಾರರು ಹಕ್ಕು ಚಲಾವಣೆ

ಮಂಗಳೂರು, ಮೇ 6: ದ.ಕ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಮತ್ತು ವಿಕಲಚೇತರಿಗೆ ಮನೆಯಿಂದಲೇ ಮತದಾನ ಪ್ರಕ್ರಿಯೆಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ಮನೆಯಿಂದಲೇ ಮತದಾನದ ಅರ್ಹತೆ ಪಡೆದ 12,205 ಮಂದಿ ಮತ ಚಲಾಯಿಸಿದ್ದಾರೆ. ಚುನಾವಣಾ ಕರ್ತವ್ಯ ನಿರತ ಅಧಿಕಾರಿ, ಸಿಬ್ಬಂದಿ ಮತ್ತು ಸೇವಾ ಮತದಾರರಿಂದ ಅಂಚೆ ಸಹಿತ ಜಿಲ್ಲೆಯಲ್ಲಿ ಶುಕ್ರವಾರದವರೆಗೆ 15,354 ಮತಗಳು ಚಲಾವಣೆಯಾಗಿದೆ. ಈ ಎಲ್ಲಾ ಮತಗಳನ್ನು ಆಯಾ ತಾಲೂಕಿನ ಚುನಾವಣಾ ಭದ್ರತಾ ಕೊಠಡಿಗಳ ಮತ ಪೆಟ್ಟಿಗೆಗಳಲ್ಲಿ ಬಿಗಿ ಭದ್ರತೆಯಲ್ಲಿರಿಸಲಾಗಿದೆ.
ಮಾರ್ಚ್ 29ರಂದು ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಗೊಂಡ ಬಳಿಕ ಮನೆಯಿಂದಲೇ ಮತದಾನ ಬಯಸುವವರಿಂದ ಅರ್ಜಿ ಆಹ್ವಾನಿಸಿ ಸ್ಥಳೀಯ ಬಿಎಲ್‌ಒಗಳ ಮೂಲಕ ಎ.17ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ನಡುವೆ ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನ ಬಯಸಿದವರಲ್ಲಿ 176 ಮಂದಿ ಮೃತಪಟ್ಟಿದ್ದು, 15 ಮಂದಿ ಮತದಾನ ನಡೆಸಲು ನಿರಾಕರಿಸಿದ್ದಾರೆ. ಇದಲ್ಲದೆ ಮತದಾನ ಪ್ರಕ್ರಿಯೆಗಾಗಿ ಪೋಲಿಂಗ್ ತಂಡವು ಭೇಟಿ ನೀಡುವ ಸಂದರ್ಭ 393 ಮಂದಿ ಮನೆಗಳಲ್ಲಿ ಲಭ್ಯವಿಲ್ಲದ ಕಾರಣ ಮತದಾನದಿಂದ ವಂಚಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 12,789 ಮತದಾರರು ಮನೆಯಿಂದಲೇ ಮತದಾನ ಬಯಸಿದ್ದರು. ಅವರಿಗೆ ಜಿಲ್ಲಾ ಚುನಾವಣಾ ಆಯೋಗವು ಎ. 29ರಿಂದ ಮತದಾನ ಪ್ರಕ್ರಿಯೆ ಆರಂಭಿಸಿತು. ಅರ್ಹತೆ ಪಡೆದ 80 ವರ್ಷ ಮೇಲ್ಪಟ್ಟ ಮತದಾರರಲ್ಲಿ 10,278 ಹಾಗೂ 1,927 ವಿಕಲ ಚೇತನ ಮತದಾರರು ಮತ ಚಲಾಯಿಸಿದ್ದಾರೆ.
ಅದಲ್ಲದೆ ಚುನಾವಣಾ ಕರ್ತವ್ಯನಿರತ ಅರ್ಹ 9,913 ಮತದಾರರಲ್ಲಿ 3,042 ಮಂದಿ, ಅರ್ಹ 541 ಸೇವಾ ಮತದಾರರಲ್ಲಿ ಒಬ್ಬರು, ಇತರ ಅಗತ್ಯ ಕರ್ತವ್ಯನಿರತ 117 ಮತದಾರರಲ್ಲಿ 106 ಮಂದಿ ಶುಕ್ರವಾರದವರೆಗೆ ಮತ ಚಲಾಯಿಸಿದ್ದಾರೆ ಎಂದು ಪೋಸ್ಟಲ್ ಬ್ಯಾಲೆಟ್ ನೋಡಲ್ ಅಧಿಕಾರಿ ಪ್ರದೀಪ್ ಡಿಸೋಜ ಮಾಹಿತಿ ನೀಡಿದ್ದಾರೆ.