ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ವೇಳೆ ರೈಲು ಢಿಕ್ಕಿಯಾಗಿ 16 ವರ್ಷದ ಬಾಲಕ ಮೃತ್ಯು

ಹೈದರಾಬಾದ್: ಹೈದರಾಬಾದ್‌ಬನ ಸನತ್ ನಗರ್ ಎಂಬಲ್ಲಿ ರೈಲ್ವೆ ಹಳಿಯ ತೀರಾ ಸನಿಹದಲ್ಲಿ ನಿಂತು ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಮೊಹಮ್ಮದ್ ಸರ್ಫರಾಝ್ ಎಂಬ 16 ವರ್ಷದ ಬಾಲಕ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಘಟನೆ ಶುಕ್ರವಾರ ನಡೆದಿದೆ. ಸರ್ಫರಾಝ್ ಒಂಬತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ.
ಸರ್ಫರಾಝ್ ರೈಲು ಹಳಿ ಪಕ್ಕ ನಿಂತಿದ್ದರೆ ಆತನ ಇಬ್ಬರು ಸ್ನೇಹಿತರು ಸ್ವಲ್ಪ ದೂರದಲ್ಲಿ ನಿಂತು ವೀಡಿಯೋ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರೈಲು ಹತ್ತಿರ ಬರುತ್ತಿದ್ದಂತೆಯೇ ಸ್ನೇಹಿತರು ದೂರ ಸರಿದು ತಮ್ಮ ಪ್ರಾಣ ಉಳಿಸಿಕೊಂಡರೆ ಅಷ್ಟೊತ್ತಿಗಾಗಲೇ ರೈಲು ಸರ್ಫರಾಝ್‌ಗೆ ಢಿಕ್ಕಿ ಹೊಡೆದಿತ್ತು ಹಾಗೂ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ವರದಿಯಾಗಿದೆ.
ಆ ಸಮಯ ಶುಕ್ರವಾರದ ಪ್ರಾರ್ಥನೆಗೆ ಆತನ ತಂದೆ ತೆರಳಿದ್ದರಿಂದ ಸರ್ಫರಾಝ್ ಸ್ನೇಹಿತರಾದ ಮುಝಮ್ಮಿಲ್ ಮತ್ತು ಸೊಹೈಲ್ ಒಂದೆರಡು ಗಂಟೆಗಳ ನಂತರ ಈ ಮಾಹಿತಿ ನೀಡಿ ಆತ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂದು ತಿಳಿಸಿದ್ದರು. ಬಾಲಕನ ತಂದೆ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ಸರ್ಫರಾಝ್ ಬಿದ್ದಿರುವುದನ್ನು ಕಂಡು ಆಘಾತಗೊಂಡಿದ್ದರು ಎಂದು ತಿಳಿದು ಬಂದಿದೆ.
ಸ್ಥಳದಿಂದ ಬಾಲಕನ ಮೊಬೈಲ್ ಫೋನ್ ಅನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.







