ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ‘ವೈದ್ಯಕೀಯ ಉಪಕರಣಗಳ ಹ್ಯಾಕಥಾನ್’ಗೆ ಚಾಲನೆ

ಕೊಣಾಜೆ: ‘ವೈದ್ಯಕೀಯ ಉಪಕರಣಗಳ ಮೇಲಿನ ವಿದೇಶಿ ಅವಲಂಬನೆ ಇಂದು ದೇಶದಲ್ಲಿ ಅಧಿಕವಿದೆ. ಇದನ್ನು ಕಡಿಮೆಗೊಳಿಸಿ ದೇಸೀಯ ಉಪಕರಣಗಳ ಉತ್ಪಾದನೆ ಹೆಚ್ಚಾಗಬೇಕು’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲ ಯದ ಕುಲಪತಿ ಪ್ರೊ.ಡಾ.ಸತೀಶ ಕುಮಾರ್ ಭಂಡಾರಿ ಸಲಹೆ ನೀಡಿದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಶನಿವಾರ ಹಮ್ಮಿಕೊಂಡಿದ್ದ ‘ನಿಟ್ಟೆ ವೈದ್ಯಕೀಯ ಉಪಕರಣಗಳ ಹ್ಯಾಕಥಾನ್ 2023’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
‘ಇಂದು ಶೇಕಡಾ 80ಕ್ಕೂ ಹೆಚ್ಚಿನ ವೈದ್ಯಕೀಯ ಉಪಕರಣಗಳು ವಿದೇಶಗಳಿಂದ ಆಮದಾಗುತ್ತಿವೆ. ಜರ್ಮನಿ, ಅಮೆರಿಕಾದ ಉಪಕರಣಗಳನ್ನು ದುಬಾರಿ ವೆಚ್ಚ ನೀಡಿ ಕೊಳ್ಳಲಾಗುತ್ತಿದೆ. ದೇಸೀಯ ಉತ್ಪನ್ನಗಳು ಇದ್ದರೂ ಗುಣಮಟ್ಟ ಕಳಪೆಯಾಗಿದೆ. ಈ ಮಿತಿಯನ್ನು ನಾವು ಪರಿಹರಿಸಿಕೊಳ್ಳಬೇಕು ಎನ್ನುವುದಾದರೆ ಸಂಶೋಧನೆ, ಸಂಶೋಧನೆಗೆ ಪೋಷಣೆ, ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
‘ಆತ್ಮನಿರ್ಭರ ಭಾರತ’ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಾಗಿದೆ. ಇದು ನಮ್ಮ ಸಂಶೋಧನೆ ಹಾಗೂ ಸಂಶೋಧಕರಿಗೆ ಆತ್ಮವಿಶ್ವಾಸವನ್ನು ತುಂಬುವ ಮಹತ್ತರ ಯೋಜನೆಯಾಗಿದೆ. ನಮ್ಮ ಸಂಶೋಧಕರಿಗೆ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಶೋಧನಾ ವೇದಿಕೆಗಳು ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹವನ್ನು ನೀಡಿದ್ದೇ ಆದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬಹುದು. ಇದರಿಂದ ಚಿಕಿತ್ಸಾ ವೆಚ್ಚ ಕಡಿಮೆಯಾಗಿ, ರೋಗಿಗಳ ಮೇಲಿನ ಆರ್ಥಿಕ ಹೊರೆ ಸುಧಾರಿಸುತ್ತದೆ. ಶ್ರೇಷ್ಠ ಚಿಕಿತ್ಸೆಯೂ ದೊರೆಯುತ್ತದೆ ಎಂದು ಹೇಳಿದರು.
ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ಡಾ.ವಿಶಾಲ್ ರಾವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ಹ್ಯಾಕಥಾನ್‌ಗಳು ಸಾಕಷ್ಟು ಶ್ರೇಷ್ಠ ಸಂಶೋಧನೆಗಳು ಕಾರ್ಯರೂಪಕ್ಕೆ ಬರಲು ಸಹಾಯ ಮಾಡಿವೆ. ನಾನು 14 ವರ್ಷಗಳ ಹಿಂದೆ ಇದೇ ರೀತಿಯ ಹ್ಯಾಕಥಾನ್ ಒಂದರಲ್ಲಿ ಮಂಡಿಸಿದ ಯೋಜನೆಯು ಕಾರ್ಯರೂಪಕ್ಕೆ ಬಂದು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯಿತು. ಆದರೆ, ಕನಸೊಂದು ಮೂರೇ ದಿನಗಳಲ್ಲಿ ನನಸಾಗಬೇಕು ಎಂದು ಬಯಸಬಾರದು. ತಾಳ್ಮೆಯಿಂದ ಕಾದು, ಯೋಜನೆಯನ್ನು ಕಾರ್ಯರೂಪಕ್ಕೆ ಬರುವವರೆಗೂ ಅವಿರತರವಾಗಿ ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಪ್ರೊ.ಡಾ.ಇಂದ್ರಾಣಿ ಕರುಣಾಸಾಗರ ಅತಿಥಿಗಳನ್ನು ಸ್ವಾಗತಿಸಿದರು. ಸಂಶೋಧನೆ ಮತ್ತು ಪೇಟೆಂಟ್ ಸಲಹೆಗಾರ ಪ್ರೊ.ಡಾ.ಇಡ್ಯಾ ಕರುಣಾಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್‌ಸ್ಟಿಟ್ಯೂಷನ್ ಇನ್ನೋವೇಷನ್ ಕೌನ್ಸಿಲ್ ಅಧ್ಯಕ್ಷ ಪ್ರೊ.ಡಾ.ಜಿ. ಶ್ರೀನಿಕೇತನ್ ವಂದನಾರ್ಪಣೆ ಸಲ್ಲಿಸಿದರು.