ಪುತ್ತೂರು ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವುದು ನನ್ನ ಗುರಿ: ಅಶೋಕ್ ರೈ

ಪುತ್ತೂರು: ಬಡವರ ಸೇವೆ ಮಾಡಬೇಕು, ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸಬೇಕು, ನೊಂದವರಿಗೆ ಸಾಂತ್ವನ ಹೇಳಬೇಕು, ಕಷ್ಟದಲ್ಲಿರುವವರಿಗೆ ನೆರವಾಗಬೇಕು ಮತ್ತು ಪುತ್ತೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡ ಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸು ವುದು ನನ್ನ ಗುರಿಯಾಗಿದೆ, ಇದಕ್ಕಾಗಿ ನನ್ನನ್ನು ಗೆಲ್ಲಿಸಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.
ಅವರು ಪುತ್ತೂರಿನ ಗಡಿ ಪ್ರದೇಶವಾದ ಈಶ್ವರಮಂಗಲದಿಂದ ಗಾಳಿಮುಖತನಕ ನಡೆದ ಕಾಂಗ್ರೆಸ್ ರೋಡ್‍ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಗಾಳಿಮುಖದಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ನನಗೆ ಸಾಕಷ್ಟು ಹಣವನ್ನು ದೇವರು ಕೊಟ್ಟಿದ್ದಾನೆ. ಆದ್ದರಿಂದ ಹಣ ಮಾಡಬೇಕೆಂಬ ಆಶೆಯಿಲ್ಲ. ಸಾಕಷ್ಟು ಜನಸೇವೆ ಮಾಡಿದ್ದೇನೆ. ಇನ್ನಷ್ಟು ಜನರ ಸೇವೆ ಮಾಡಬೇಕೆಂಬ ಉದ್ದೇಶದಲ್ಲಿ ರಾಜಕೀಯಕ್ಕೆ ಬಂದಿದ್ದೇನೆ. ನೀವು ನೀಡಿದ ಮತಗಳು ಒಂದೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ ಎಂದರು.
ಪುತ್ತೂರು ಕ್ಷೇತ್ರದಲ್ಲಿ ಜನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕಾರ ಪಡೆದವರು ಜನರನ್ನು ಮರೆತು ಕಮಿಷನ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಕ್ಷೇತ್ರದ ಜನರ ಮಾತಿನಿಂದಲೇ ಅರ್ಥವಾಗುತ್ತದೆ. ಊರು, ಕೇರಿ ಅಭಿವೃದ್ದಿಯಾಗಬೇಕು, ನೆಮ್ಮದಿಯ ಜೀವನ ಸಿಗಬೇಕು ಎಂದು ಜನ ಓಟು ಹಾಕಿದ್ದರು ಆದರೆ ಗೆದ್ದವರು ಅದ್ಯಾವುದನ್ನೂ ನೀಡದೆ ತಾವೇ ಎಲ್ಲವನ್ನೂ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ರಸ್ತೆ ಇಲ್ಲ, ಬಡವರಿಗೆ ಮನೆಯಿಲ್ಲ, ಹಕ್ಕುಪತ್ರ ನೀಡಿಲ್ಲ. ಉಳ್ಳವನಿಂದ ಹಣ ಪಡೆದುಕೊಂಡು ಅವರಿಗೆ ಎಲ್ಲವನ್ನೂ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಳೆದ 30 ವರ್ಷಗಳಿಂದ ನಾವು ನೀವೆಲ್ಲರೂ ಕರೆಂಟ್ ಬಿಲ್ ಕಟ್ಟದೆ ತೋಟಕ್ಕೆ ನೀರು ಹಾಕುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಪ್ರತೀಯೊಬ್ಬ ಕೃಷಿಕರೂ ಈ ಯೋಜನೆಯ ಮೂಲವನ್ನು ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಪುತ್ತೂರು ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್‍ಗೆ ಹೋದ ಕಡೆಯೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿದರು.
ಈಶ್ವರಮಂಗಲ ಪೇಟೆಯಿಂದ ಕಾಲ್ನಡಿಗೆ ಮೂಲಕ ರೋಡ್‍ಶೋ ನಡೆಸಿದ ಅಶೋಕ್ ರೈಯವರು ಈಶ್ವರ ಮಂಗಲ ಪೇಟೆಯಲ್ಲಿ ಮತಯಾಚನೆ ನಡೆಸಿದರು. ಆ ಬಳಿಕ ವಹನದ ಮೂಲಕ ತೆರಳಿ ಮೇನಾಲ, ಪಳ್ಳತ್ತೂರಿನಲ್ಲಿ ರೋಡ್ ಶೋ ನಡೆಸಿದರು. ಬಳಿಕ ಗಡಿಪ್ರದೇಶವಾದ ಗಾಳಿಮುಖದಲ್ಲಿ ಕಾಲ್ನಡಿಗೆ ಮೂಲಕ ರೋಡ್‍ಶೋ ನಡೆಸಿದ ಅಶೋಕ್ ರೈಯವರು ಗಾಳಿಮುಖ ಪಟ್ಟಣದಲ್ಲಿ ಅಂಗಡಿಗಳಿಗೆ ತೆರಳಿ ಮತಯಾಚನೆ ನಡೆಸಿದರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.
ಕಾರ್ಯಕ್ರಮದಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಮುರಳೀದರ್ ರೈ ಮಠಂತಬೆಟ್ಟು, ಶ್ರೀರಾಂ ಪಕ್ಕಳ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಮಹಮ್ಮದ್ ಬಡಗನ್ನೂರು ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ತಿತರಿದ್ದರು.







