ಐಪಿಎಲ್: ಚೆನ್ನೈ ಕಿಂಗ್ಸ್ ವಿರುದ್ಧ ಮುಗ್ಗರಿಸಿದ ಮುಂಬೈ
ನೆಹಾಲ್ ಏಕಾಂಗಿ ಹೋರಾಟ ವ್ಯರ್ಥ, ಮಥೀಶ ಪಥಿರಣಗೆ ಮೂರು ವಿಕೆಟ್

ಚೆನ್ನೈ, ಮೇ 6: ಆರಂಭಿಕ ಬ್ಯಾಟರ್‌ಗಳಾದ ಡೆವೊನ್ ಕಾನ್ವೆ(44 ರನ್, 42 ಎಸೆತ)ಹಾಗೂ ಋತುರಾಜ್ ಗಾಯಕ್ವಾಡ್(30 ರನ್, 16 ಎಸೆತ) ಅವರ ಸಮಯೋಚಿತ ಬ್ಯಾಟಿಂಗ್ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್‌ನ 39ನೇ ಪಂದ್ಯವನ್ನು ಆರು ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ತಾನಾಡಿದ 11ನೇ ಪಂದ್ಯದಲ್ಲಿ 6ನೇ ಗೆಲುವು ದಾಖಲಿಸಿದ ಚೆನ್ನೈ 13 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಶನಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 140 ರನ್ ಗುರಿ ಬೆನ್ನಟ್ಟಿದ ಚೆನ್ನೈ ತಂಡ 17.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು. ಶಿವಂ ದುಬೆ (ಔಟಾಗದೆ 26 ರನ್, 18 ಎಸೆತ) ಹಾಗೂ ಎಂ.ಎಸ್. ಧೋನಿ(ಔಟಾಗದೆ 2)ಗೆಲುವನ್ನು ಖಚಿತಪಡಿಸಿದರು. ಮುಂಬೈ ಪರ ಪಿಯೂಷ್ ಚಾವ್ಲಾ(2-25)ಎರಡು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಮಥೀಶ ಪಥಿರಣ(3-15) ಸಾರಥ್ಯದ ಬೌಲರ್‌ಗಳ ಕರಾರುವಾಕ್ ದಾಳಿಗೆ ತತ್ತರಿಸಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು.
ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ ದೀಪಕ್ ಚಹಾರ್(2-18) ಹಾಗೂ ತುಷಾರ್ ದೇಶಪಾಂಡೆ(2-26)ಪಥಿರಣಗೆ ಸಮರ್ಥ ಸಾಥ್ ನೀಡಿದರು. ಆರಂಭಿಕ ವೈಫಲ್ಯಕ್ಕೆ ಒಳಗಾದ ಮುಂಬೈ ಪರ ನೆಹಾಲ್ ವಧೇರ(64 ರನ್, 51 ಎಸೆತ)ಗರಿಷ್ಟ ಸ್ಕೋರರ್ ಎನಿಸಿಕೊಂಡರು. ಸೂರ್ಯಕುಮಾರ್ ಯಾದವ್(26 ರನ್, 22 ಎಸೆತ) ಹಾಗೂ ಟ್ರಿಸ್ಟನ್ ಸ್ಟಬ್ಸ್(20 ರನ್, 21 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಮುಂಬೈ 2.5 ಓವರ್‌ಗಳಲ್ಲಿ 14 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಗ್ರೀನ್(6 ರನ್), ಇಶಾನ್ ಕಿಶನ್(7 ರನ್) ಹಾಗೂ ರೋಹಿತ್ ಶರ್ಮಾ(0) ಬೇಗನೆ ವಿಕೆಟ್ ಕೈಚೆಲ್ಲಿದರು.