ಮತ ಎಣಿಕೆ ಕಾರ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಿ: ತುಕಾರಾಂ ಹರಿಬಾವು ಮುಂಡೆ

ಉಡುಪಿ: ರಾಜ್ಯ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೇ 13ರಂದು ನಡೆ ಯುವ ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತ ಎಣಿಕೆ ಸಂದರ್ಭ ದಲ್ಲಿ ಮತಗಳ ಎಣಿಕೆಯಲ್ಲಿ ಯಾವುದೇ ತಪ್ಪುಗಳಾಗದಂತೆ ತಮ್ಮ ಕರ್ತವ್ಯವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವ ಹಿಸುವಂತೆ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ತುಕಾರಾಂ ಹರಿಬಾವು ಮುಂಡೆ ಹೇಳಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಡೆದ ತರಬೇತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡುತಿದ್ದರು.
ಚುನಾವಣೆಯ ಅತ್ಯಂತ ಪ್ರಮುಖ ಮತ್ತು ಅಂತಿಮ ಹಂತವಾದ ಮತ ಎಣಿಕೆ ಕಾರ್ಯವು ಇಡೀ ಚುನಾವಣೆ ಪ್ರಕ್ರಿಯೆಯ ಮಹತ್ವದ ಘಟ್ಟ ವಾಗಿದ್ದು, ಜನಪ್ರತಿಯೊಬ್ಬರನ್ನು ಆಯ್ಕೆ ಮಾಡುವ ಈ ಪ್ರಕ್ರಿಯೆಯಲ್ಲಿ ಸಿಬ್ಬಂದಿಗಳು ಯಾವುದೇ ಗೊಂದಲ, ಆತುರ, ಒತ್ತಡಗಳಿಗೆ ಒಳಗಾಗದೇ, ನಿಖರವಾದ ಫಲಿತಾಂಶವನ್ನು ನೀಡಲು ಅನು ಕೂಲವಾಗುವಂತೆ ಅತ್ಯಂತ ಜವಾಬ್ದಾರಿಯುತವಾಗಿ ಮತ ಎಣಿಕೆ ಕಾರ್ಯವನ್ನು ನಿರ್ವಹಿಸುವಂತೆ ಅವರು ತಿಳಿಸಿದರು.
ಪ್ರತಿಯೊಂದು ಚುನಾವಣೆ ಮತ್ತು ಮತ ಎಣಿಕೆ ಕಾರ್ಯವು ಭಿನ್ನ ವಾಗಿದ್ದು, ಮತ ಎಣಿಕೆಯು ಯಾವುದೇ ಗೊಂದಲಗಳಿಂದ ಕೂಡಿರದಂತೆ ಸ್ಪಷ್ಟವಾಗಿ ಕ್ರೂಡೀಕರಿಸಿ, ಅಭ್ಯಥಿಗಳು ಮತ್ತು ಅವರ ಏಜೆಂಟರುಗಳಿಂದ ಯಾವುದೇ ಆಕ್ಷೇಪಣೆಗಳು ಬಾರದಂತೆ ಎಚ್ಚರವಹಿಸುವಂತೆ ಹೇಳಿದರು.
ಮತ ಎಣಿಕೆ ಕಾರ್ಯದ ಕುರಿತಂತೆ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳ್ನು ತಪ್ಪದೇ ಪಾಲಿಸುವಂತೆ ತಿಳಿಸಿದ ಅವರು, ಇವಿಎಂಗಳಲ್ಲಿನ ಮತ ಎಣಿಕೆ ಮತ್ತು ಪೋಸ್ಟಲ್ ಬ್ಯಾಲೆಟ್‌ಗಳ ಎಣಿಕೆಯ ಕುರಿತಂತೆ ಯಾವುದೇ ಗೊಂದಲಗಳಿದ್ದಲ್ಲಿ ತರಬೇತಿ ಸಮಯದಲ್ಲಿ ಬಗೆಹರಿಸಿ ಕೊಳ್ಳುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಮತ ಎಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳು ತಮಗೆ ನಿಗದಿಪಡಿಸಿದ ಅವಧಿಗೆ ಸರಿಯಾಗಿ ಮತ ಎಣಿಕೆ ಕೇಂದ್ರಕ್ಕೆ ಹಾಜರಾಗಿ, ತಮ್ಮ ಟೇಬಲ್ ಬಳಿ ಕರ್ತವ್ಯ ನಿರ್ವಹಿಸ ಬೇಕು. ಹಾಗೂ ಪ್ರತೀ ಹಂತದ ಮತ ಎಣಿಕೆಯ ವಿವರಗಳನ್ನು ಕೇಂದ್ರದಲ್ಲಿ ಹಾಜರಿರುವ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ್‌ಗಳಿಗೆ ಯಾವುದೇ ಗೊಂದಲಕ್ಕೆ ಒಳಗಾಗದಂತೆ ತಿಳಿಸುವುದರ ಮೂಲಕ ಸಕಾಲದಲ್ಲಿ ನಿಖರ ಫಲಿತಾಂಶ ನೀಡಲು ಅನುಕೂಲವಾಗುವಂತೆ ಕಾರ್ಯ ನಿರ್ವಹಿಸುವಂತೆ ಅವರು ತಿಳಿಸಿದರು.
ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದವರು ಸ್ಪಷ್ಟಪಡಿಸಿದರು.
ಇದಿನ ತರಬೇತಿ ಕಾರ್ಯಕ್ರಮದಲ್ಲಿ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳ ಸಾಮಾನ್ಯ ವೀಕ್ಷಕರಾದ ಅಣ್ಣಾ ದಿನೇಶ್ ಕುಮಾರ್, ಕಾರ್ಕಳ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಆಂಧ್ರ ವಂಶಿ, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ತರಬೇತಿ ನಿರತ ಐಎಎಸ್ ಆಧಿಕಾರಿ ಯತೀಶ್ ಉಪಸ್ಥಿತರಿದ್ದರು.
ಮಾಸ್ಟರ್ ಟ್ರೈನರ್ ಡಾ.ಅಶೋಕ್ ಕಾಮತ್ ಮತ ಎಣಿಕೆ ಪ್ರಕ್ರಿಯೆಗಳ ಬಗ್ಗೆ ತರಬೇತಿ ನೀಡಿದರು.