ಬಿಜೆಪಿ ಆಡಳಿತ ವೈಫಲ್ಯಕ್ಕೆ ಪದೇ ಪದೇ ಪಿಎಂ ಆಗಮನವೇ ಸಾಕ್ಷಿ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್

ಉಡುಪಿ: ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ವೈಫಲ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಕ್ಷದ ಪರ ಪ್ರಚಾರಕ್ಕೆ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿರುವುದೇ ಸಾಕ್ಷಿ ಎಂದು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯ ದರ್ಶಿ ಪದ್ಮರಾಜ್ ಆರ್. ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಅಭಿವೃದ್ಧಿ ಕರ್ಯ ಮಾಡಿದ್ದರೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಇಷ್ಟೊಂದು ಬಾರಿ ಬರುವ ಆವಶ್ಯಕತೆಯೇ ಇರಲಿಲ್ಲ. ಆದ್ದರಿಂದ ರಾಜ್ಯ ಸರಕಾರದ ವೈಫಲ್ಯಗಳನ್ನು ಮರೆಮಾಚಲು ಪ್ರಧಾನಿ ಪದೇ ಪದೇ ಬರಬೇಕಾಗಿದೆ ಎಂದವರು ನುಡಿದರು.
ಬಿಜೆಪಿ ಸರಕಾರದ ಅಗಾಧ ಪ್ರಮಾಣದ ಭ್ರಷ್ಟಾಚಾರ ರಾಜ್ಯದ ಜನರಿಗೆ ಸ್ಪಷ್ಟವಾಗಿ ಅರಿವಾಗಿದೆ. ಅದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನರು ಬಿಜೆಪಿಕ್ಕೆ ತಕ್ಕದಾದ ಉತ್ತರ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್, ಆಹಾರ ಸಾಮಗ್ರಿ, ಗ್ಯಾಸ್ ಸಿಲಿಂಡರ್ ದರಗಳು ದುಪ್ಪಟ್ಟುಗೊಂಡಿವೆ. ಪಕ್ಷ ಪ್ರಣಾಳಿಕೆಯಲ್ಲಿ ಹಿಂದೆ ನೀಡಿದ್ದ ಭರವಸೆಗಳೆಲ್ಲವೂ ಹಾಗೆಯೇ ಉಳಿದುಕೊಂಡಿವೆ. ವಾಮಮಾರ್ಗದಲ್ಲಿ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.
ಆದರೆ ಕಾಂಗ್ರೆಸ್ ಸರಕಾರ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ನೀಡಿದ್ದ 165 ಭರವಸೆಗಳಲ್ಲಿ 158ನ್ನು ಈಡೇರಿಸಿದೆ. ಈ ಬಾರಿಯೂ ಹಲವು ಗ್ಯಾರಂಟಿಗಳನ್ನು ನೀಡಿದ್ದು ಅಧಿಕಾರಕ್ಕೆ ಬಂದರೆ ಎಲ್ಲವನ್ನೂ ಈಡೇರಿಸ ಲಿದೆ ಎಂದರು.
ಬಿಜೆಪಿ ಪಕ್ಷ ಜೀವಂತವಾಗಿರಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರಣ. ಅವರ ಸಮುದಾಯವನ್ನೇ ದೂಷಿಸುವ ಬಿಜೆಪಿಗರಿಗೆ ಈ ಬಾರಿ ಲಿಂಗಾಯತರು ಸೂಕ್ತ ಉತ್ತರ ನೀಡಲಿದ್ದಾರೆ. ಕಾಂಗ್ರೆಸ್ ಅಭಿವೃದ್ಧಿ ವಿಚಾರ ಗಳನ್ನು ಇಟ್ಟುಕೊಂಡು ಈ ಬಾರಿಯ ಚುನಾವಣೆ ಎದುರಿಸಲಿದೆ ಎಂದರು.
ಯಾವುದೇ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪ ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿಲ್ಲ. ಕಾನೂನು ಬಾಹಿರ ಚಟುವಟಿಕೆ ನಡೆಸುವ ಸಂಘ- ಸಂಸ್ಥೆಗಳನ್ನು ಮಾತ್ರ ನಿಷೇಧಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಐದು ಸ್ಥಾನಗಳನ್ನು ಕಾಂಗ್ರೆಸ್ ಜಯಿಸಲಿದೆ. ಅದೇ ರೀತಿ ರಾಜ್ಯದಲ್ಲಿ ೧೩೫ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪದ್ಮರಾಜ್ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಶೇಖರ ಕೋಟ್ಯಾನ್, ಜಿಲ್ಲೆಯ ಪ್ರಮುಖರಾದ ಮಿಥುನ್ ಅಮೀನ್, ಸೌರಭ್ ಬಲ್ಲಾಳ್, ಯತೀಶ್ ಕರ್ಕೇರ, ಉದ್ಯಾವರ ನಾಗೇಶ್ ಕುಮಾರ್, ಗಿರೀಶ್ ಸಗ್ರಿ, ಮಹಮ್ಮದ್ ಆರೀಫ್, ಶಿವಾಜಿ ಸುವರ್ಣ ಉಪಸ್ಥಿತರಿದ್ದರು.







