‘ರಾಷ್ಟವಾದದ ಕಿಡಿ ಮನೆ ಮನೆ ತಲುಪಿಸುವ ಕಾರ್ಯ ಮಾಡಿ’
ಕಾರ್ಕಳದಲ್ಲಿ ರೋಡ್ ಶೋ ಮಾಡಿದ ಯುಪಿ ಸಿಎಂ ಆದಿತ್ಯನಾಥ್

ಉಡುಪಿ: ಟೀಂ ಇಂಡಿಯಾಗೆ ಮೋದಿ ಕ್ಯಾಪ್ಟನ್ ಆಗಿದ್ದಾರೆ. ಪ್ರಧಾನಿ ಮೋದಿ ತಂಡದಲ್ಲಿ ಕರ್ನಾಟಕ ಯಾವತ್ತೂ ಇರಬೇಕು. ರಾಷ್ಟವಾದಕ್ಕೆ ಸಹಕಾರ ನೀಡುತ್ತಿರುವ ನೀವು ಅದರ ಕಿಡಿಯನ್ನು ಮನೆ ಮನೆ ತಲುಪಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತಿಳಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸುನಿಲ್ ಕುಮಾರ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಶನಿವಾರ ಕಾರ್ಕಳ ಪೇಟೆಯಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅಯೋಧ್ಯೆ ರಾಮನ ಊರಿನಿಂದ ಪರಶುರಾಮನ ಭೂಮಿಗೆ ಬಂದಿದ್ದೇನೆ. ನಾನು ಹನುಮನ ಜನ್ಮ ಭೂಮಿಗೆ ಬಂದಿದ್ದೇನೆ. ವನವಾಸ ಕಾಲದಲ್ಲಿ ಕರ್ನಾಟಕ ದಲ್ಲೇ ರಾಮನಿಗೆ ಹನುಮನ ಸಾಂಗತ್ಯ ದೊರಕಿತು. ಹನುಮಂತ ರಾವಣನ ಲಂಕೆಯನ್ನು ನಾಶ ಮಾಡಿ ಅಧರ್ಮ ಹೋಗಲಾಡಿಸಲು ಸಹಕರಿದ್ದನು. ಅದೇ ರೀತಿ ನೀವು ರಾಷ್ಟ್ರಭಕ್ತ ಜನರು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅಧರ್ಮವನ್ನು ಹೋಗಲಾಡಿಸಬೇಕು ಎಂದರು.
ಪಿಎಫ್‌ಐಗೆ ಬೆಂಬಲ ನೀಡುವವರನ್ನು ಸೋಲಿಸಬೇಕು. ಆ ಮೂಲಕ ಮತ್ತೊಮ್ಮೆ ಡಬ್ಬಲ್ ಇಂಜಿನ್ ಸರಕಾರ ವನ್ನು ಅಧಿಕಾರಕ್ಕೆ ತರಬೇಕು. ಈಗ ಭಾರತವು ವಿಶ್ವದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ದೇಶದ ಐಟಿ ಹಬ್ ಆಗಿ ಕರ್ನಾಟಕ ರಾಜ್ಯವು ದೊಡ್ಡ ಕೊಡುಗೆ ನೀಡಿದೆ. ಕರ್ನಾಟಕ ಭಾರತದ ವಿಕಾಸಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ಅವರು ತಿಳಿಸಿದರು.
ಜನವರಿಯಲ್ಲಿ ಅಯೋದ್ಯೆಯಲ್ಲಿ ರಾಮಂಮದಿರ ಪೂರ್ಣವಾಗುತ್ತದೆ. ರಾಮಮಂದಿರದಲ್ಲಿ ಕರ್ನಾಟಕ ಕರ ಸೇವಕರ ಕೊಡುಗೆ ದೊಡ್ಡದು. ಭವ್ಯ ಮಂದಿರದ ನಿರ್ಮಾಣದ ವೇಳೆ ಕರ್ನಾಟಕ ವಾಸಿಗಳನ್ನು ಆಹ್ವಾನಿಸಲು ಬಂದಿದ್ದೇನೆ. ನಿಮಗೆಲ್ಲ ಆಮಂತ್ರಣ ನೀಡಲು ಬಂದಿದೇನೆ. ರಾಮಮಂದಿರದ ಮೂಲಕ ರಾಮರಾಜ್ಯದ ಸುಪ್ರಭಾತವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.